ಜನತಾ ಬ್ಯಾಂಕು ಲಿಂ.ಬಿ.ಆರ್.ಪಾಟೀಲರ ಸಮಾಜ ಸೇವೆಯ ಸಂಕಲ್ಪದ ಫಲ : ಪಾಟೀಲ
ಹಾರೂಗೇರಿ ಜನತಾ ಬ್ಯಾಂಕಿನ 47ನೇ ಮಹಾಸಭೆ
ಹಾರೂಗೇರಿ 31: ಜನತಾ ಬ್ಯಾಂಕು ಲಿಂ.ಬಿ.ಆರ್.ಪಾಟೀಲರ ಸಮಾಜ ಸೇವೆಯ ಸಂಕಲ್ಪದ ಫಲವಾಗಿದ್ದು, ಜನತಾ ಬ್ಯಾಂಕಿನ ಮೂಲಕ ಈ ಪರಿಸರದ ಆರ್ಥಿಕ ಅಭಿವೃದ್ಧಿಯ ಕನಸು ಕಂಡಿದ್ದರು. ಜನತೆಯ ವಿಶ್ವಾಸವೇ ಜನತಾ ಬ್ಯಾಂಕಿನ ಮೂಲ ಬಂಡವಾಳವಾಗಿದೆ ಎಂದು ಜನತಾ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣ ಜನತಾ ಸಹಕಾರ ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಭವನದಲ್ಲಿ ಶನಿವಾರ ನಡೆದ 47ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರಿ ಬ್ಯಾಂಕಿನ ಮತದಾನದ ಹಕ್ಕಿನಿಂದ ಯಾವೊಬ್ಬ ಸದಸ್ಯರೂ ವಂಚಿತರಾಗದಂತೆ, ನಮ್ಮ ಬ್ಯಾಂಕಿನ ಪ್ರತಿಯೊಬ್ಬ ಸದಸ್ಯರೂ ಗುರುತಿನ ಚೀಟಿಯನ್ನು ಪಡೆದುಕೊಳ್ಳಬೇಕು. ಸದಸ್ಯ ಗ್ರಾಹಕರ ಅಪೂರ್ವ ಬೆಂಬಲ ಮತ್ತು ಆಡಳಿತ ಮಂಡಳಿಯ ಸಮಾಜಮುಖಿ ಚಿಂತನೆಯಿಂದಾಗಿ ಜನತಾ ಬ್ಯಾಂಕು ಇಂದು ಜನರ ಹೃದಯದಲ್ಲಿ ಮನೆಮಾಡಿದೆ. ಬ್ಯಾಂಕಿನ ಅಭಿವೃದ್ಧಿಗಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟಿರುವುದಾಗಿ ರಾಜಶೇಖರ ಪಾಟೀಲರು ಹೇಳಿದರು.
ಬ್ಯಾಂಕಿನ ವೃತ್ತಿಪರ ನಿರ್ದೇಶಕರು ಹಾಗೂ ಸಿಎ ಸಿ.ಡಿ.ಮುಂಗುರವಾಡಿ ಮಾತನಾಡುತ್ತ ಭಾರತ ಆರ್ಥಿಕತೆ ವ್ಯವಸ್ಥೆಯಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಜಗತ್ತಿನ 5ನೇ ಬಲಾಢ್ಯ ಆರ್ಥಿಕ ರಾಷ್ಟ್ರವಾಗಿದೆ. ಭಾರತ ಆರ್ಥಿಕವಾಗಿ ವಿಶ್ವಗುರುವಾಗಿ ಬೆಳೆಯಲು ಸಹಕಾರ ಬ್ಯಾಂಕುಗಳ ಕೊಡುಗೆಯೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಬ್ಯಾಂಕಿನ ಆಡಳಿತ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಸಿ.ಆರ್.ಗುಡಸಿ ಪ್ರಾಸ್ತಾವಿಕವಾಗಿ ಮಾತನಾಡು ಬ್ಯಾಂಕಿನ ಚೇರ್ಮನ್ನರಾದ ರಾಜಶೇಖರ ಪಾಟೀಲರ ದಕ್ಷ ಆಡಳಿತ ನಿರ್ವಹಣೆಯಲ್ಲಿ ಬ್ಯಾಂಕು ರಾಜ್ಯದಲ್ಲಿ ಸಾಧನೆಯ ಹೊಸ ದಾಖಲೆಯತ್ತ ಸಾಗುತ್ತಿದೆ. ಜನತಾ ಬ್ಯಾಂಕು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ಎಲ್ಲ ವರ್ಗದ ಜನರಿಗೆ ಆರ್ಥಿಕ ಸಹಾಯ ಮಾಡುತ್ತ ಜನರಲ್ಲಿ ನಮ್ಮ ಬ್ಯಾಂಕು ಎಂಬ ಭಾವನೆ ಮೂಡಿದೆ ಎಂದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಅಮರಶೆಟ್ಟಿ ಅವರು ಅಡಾವೆ ಮತ್ತು ವಾರ್ಷಿಕ ವರದಿ ವಾಚನ ಮಾಡುತ್ತ 4800 ಸದಸ್ಯರಿದ್ದು, 207 ಕೋಟಿಗೂ ಮೀರಿ ದುಡಿಯುವ ಬಂಡವಾಳ ಹೊಂದಿದೆ. 182 ಕೋಟಿ ರೂ ಠೇವು ಸಂಗ್ರಹಿಸಿದ್ದು, ಪ್ರಸಕ್ತ ವರ್ಷದಲ್ಲಿ 92 ಕೋಟಿ ರೂ ಸಾಲ ವಿತರಿಸಿ, 1.15 ಕೋಟಿರೂ ನಿವ್ವಳ ಲಾಭ ಹೊಂದಿದೆ ಎಂದು ಹೇಳಿದರು.
ಈವೇಳೆ ಜನತಾ ಬ್ಯಾಂಕು 50 ವರ್ಷಗಳನ್ನು ಪೂರೈಸುವುದರಲ್ಲಿದ್ದು, ಬ್ಯಾಂಕಿನ ಸುವರ್ಣ ಮಹೋತ್ಸವ ಸಂಭ್ರಮದ ನಿಮಿತ್ತ ಸಮಾಜಮುಖಿಯಾಘಿ, ವಿಭಿನ್ನ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಬ್ಯಾಂಕಿನ ಸಮಾಜ ಹಾಗೂ ವಿವಿಧ ಕ್ಷೇತ್ರಗಳ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಕುರಿತು ನೆರೆದ ಸದಸ್ಯರು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ತಮ್ಮಣ್ಣಪ್ಪ ತೇಲಿ, ನಿರ್ದೇಶಕರಾದ ಪ್ರಕಾಶ ಕಶೆಟ್ಟಿ, ಸಂಜೀವ ಅವಕ್ಕನವರ, ಶಂಕರ ಮಾನಶೆಟ್ಟಿ, ಪ್ರಭುಲಿಂಗ ಪಾಲಬಾಂವಿ, ಭೀಮಗೊಂಡ ಕರ್ಣವಾಡಿ, ಹಣಮಂತ ಮಡಿವಾಳ, ರಾಯಪ್ಪ ನಾಯಿಕ, ಬಸಗೌಡ ಪಾಟೀಲ, ಜಯಶ್ರೀ ಪಾಟೀಲ, ರೇಖಾ ದೇಶಪಾಂಡೆ, ಯಶೋಧಾ ಪಾಟೀಲ, ಕಲ್ಪನಾ ಮಾದರ, ಆಡಳಿತ ಮಂಡಳಿ ವ್ಯವಸ್ಥಾಪನಾ ಸಮಿತಿ ಸದಸ್ಯ ಎಮ್.ಆರ್.ಮಠಪತಿ, ಎಸ್.ಟಿ.ತೇಲಿ, ಶಾಖಾ ವ್ಯವಸ್ಥಾಪಕರಾದ ಅಶೋಕ ಪಾಟೀಲ, ಆನಂದ ಗುರವ, ಮಹಾದೇವ ಜೀರಗಾಳೆ ಹಾಗೂ ಹಾರೂಗೇರಿ, ಉಗಾರ ಖುರ್ದ, ರಾಯಬಾಗ ಮತ್ತು ಅಥಣಿ ಶಾಖೆಗಳ ಸಾವಿರಾರು ಸದಸ್ಯರು ಮಹಾಸಭೆಯಲ್ಲಿ ಉಪಸ್ಥಿತರಿದ್ದರು.