ಜಮ್ಮು- ಕಾಶ್ಮೀರ; ಶ್ರೀನಗರದಲ್ಲಿ ಪೊಲೀಸ್ ಪೇದೆ, ಸಂಬಂಧಿಕನ ನಿಗೂಢ ಸಾವು
ಶ್ರೀನಗರ, ಫೆ 4, ಸಶಸ್ತ್ರ ಪಡೆಗಳ ಒಬ್ಬ ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಆತನ ಸಂಬಂಧಿಕನ ಮೃತ ದೇಹಗಳು ಮಂಗಳವಾರ ನಿಗೂಢ ರೀತಿಯಲ್ಲಿ ಪತ್ತೆಯಾಗಿರುವ ಹಿನ್ನಲೆ ಯಲ್ಲಿ ಶ್ರೀನಗರ ಹೊರವಲಯದಲ್ಲಿರುವ ಸಶಸ್ತ್ರ ಪಡೆ ಪೊಲೀಸ್ ಸಿಬ್ಬಂದಿ ವಸತಿ ಸಂಕೀರ್ಣದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಪಂಥಾ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಸಶಸ್ತ್ರ ಪೊಲೀಸ್ ಸಂಕೀರ್ಣದಲ್ಲಿ ಕಾನ್ಸ್ ಟೇಬಲ್ ಸಮೀರ್ ಜೀ ಕೌಲ್ ವಾಸವಾಗಿದ್ದರು. ಕಳೆದ ರಾತ್ರಿ ಅವರ ಸಂಬಂಧಿಕ ವೀರಜೀ ಕೌಲ್ ಅವರೊಂದಿಗೆ ಕಾಣಿಸಿಕೊಂಡಿದ್ದರು.
ಆದರೆ, ಇಂದು ಬೆಳಗ್ಗೆ ವಸತಿಗೃಹಗಳ ಇತರ ನಿವಾಸಿಗಳು ಸಮೀರ್ ಜಿ ಅವರು ಹೊರಗೆ ಕಾಣಿಸಿಕೊಳ್ಳದ ಕಾರಣ, ಅವರ ಮನೆ ಬಾಗಿಲನ್ನು ತಟ್ಟಿದ್ದಾರೆ. ಒಳಗಿಂದ ಯಾವುದೇ ಉತ್ತರ ಬರದಿದ್ದಾಗ, ಜೊತೆಗೆ ಮನೆಯ ಬಾಗಿಲನ್ನು ಒಳಗಡೆಯಿಂದ ಚಿಲಕ ಹಾಕಿಕೊಂಡಿದ್ದ ಕಾರಣ ಅನುಮಾನಗೊಂಡ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಬಾಗಿಲು ಒಡೆದು ನೋಡಿದಾಗ ಸಮೀರ್ ಜೀ ಹಾಗೂ ವೀರ್ ಜೀ ಮೃತಪಟ್ಟಿರುವುದು ಪತ್ತೆಯಾಗಿದೆ. ಆದರೆ ಸಾವಿಗೆ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿ ಮೂಲಗಳು "ಯುಎನ್ಐ" ಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇಬ್ಬರ ನಿಗೂಢ ಸಾವಿನ ಹಿಂದಿನ ಕಾರಣಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಲ್ಲ ಕಾನೂನು ಹಾಗೂ ವೈದ್ಯಕೀಯ ಪ್ರಕ್ರಿಯೆಗಳು ಮುಗಿದ ನಂತರ ಮೃತ ದೇಹಗಳನ್ನು ಅಂತ್ಯಕ್ರಿಯೆಗಾಗಿ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.