ಜಿಲ್ಲಾ ಕೇಂದ್ರ ಬಾಗಲಕೋಟದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನ
ಮಹಾಲಿಂಗಪುರ 24: ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಪಕ್ಷವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಸೆಪ್ಟೆಂಬರ್ 26 ರಂದು ಜಿಲ್ಲಾ ಕೇಂದ್ರ ಬಾಗಲಕೋಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಣ್ಮಂತ ಮಾವಿನಮರದ ತಿಳಿಸಿದರು.
ಶನಿವಾರ ಜಿಎಲ್ ಬಿಸಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹಾಗೂ ಕನ್ನಡ ನಾಡಿನ ಹಿತದೃಷ್ಟಿಯಿಂದ ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇರುವುದರಿಂದ ಬಾಗಲಕೋಟ ಜಿಲ್ಲೆ ಹಾಗೂ ರಾಜ್ಯದಾದ್ಯಂತ ಜೆಡಿಎಸ್ ಪಕ್ಷವನ್ನು ಮತ್ತೊಮ್ಮೆ ಸದೃಢಗೊಳಿಸಲು ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ.
ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕರು ಹಾಗೂ ಶಾಸಕರೂ ಆದ ಸುರೇಶ ಬಾಬು ಮತ್ತು ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಜಿ. ಟಿ.ದೇವೆಗೌಡ ನೇತೃತ್ವದಲ್ಲಿ ಈ ಸದಸ್ಯತ್ವ ಅಭಿಯಾನ ನಡೆಯಲಿದ್ದು, ತೇರದಾಳ ವಿಧಾನಸಭಾ ಮತ ಕ್ಷೇತ್ರದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕಾಧ್ಯಕ್ಷ ಸುರೇಶ ಮಡಿವಾಳರ, ಮುಖಂಡರಾದ ನಿಂಗಪ್ಪ ಬಾಳಿಕಾಯಿ, ಭುಜಬಲಿ ಕೆಂಗಾಲಿ, ಹುಚ್ಚೇಶ ಹದ್ದನ್ನವರ, ಮಹಾದೇವ ಕೋಳಿಗುಡ್ಡ, ಜಗದೀಶ ಬಡಿಗೇರ, ಬಸವರಾಜ ಅಮರಗೋಳ, ರಘು ಅಂಬಿ, ಸತ್ಯಪ್ಪ ಮಹೇಶವಾಡಗಿ, ಮಂಜುನಾಥ ಕಂಬಾರ, ವಿನಯ ಕುಳ್ಳೊಳ್ಳಿ ಮತ್ತು ಮಹಾಲಿಂಗ ತೇಲಿ ಇದ್ದರು.