ಮಹಲಿಂಗಪುರ

ಕಷ್ಟ ಪಟ್ಟು ಓದಿ ಇಷ್ಟು ಪಟ್ಟು ಪರೀಕ್ಷೆ ಬರೆದರೆ ರ‍್ಯಾಂಕ್ ಕಷ್ಟವೇನಲ್ಲ

ಕಷ್ಟ ಪಟ್ಟು ಓದಿ ಇಷ್ಟು ಪಟ್ಟು ಪರೀಕ್ಷೆ ಬರೆದರೆ ರ‍್ಯಾಂಕ್ ಕಷ್ಟವೇನಲ್ಲ
ಮಹಾಲಿಂಗಪುರದ ಕೆಎಲ್‍ಇ ಪಾಲಿಟೆಕ್ನಿಕ್‍ನಲ್ಲಿ ಜೆಸಿ ಆಂಗ್ಲ ಮಾಧ್ಯಮ ಶಾಲೆ ಸಹಯೋಗದಲ್ಲಿ ಜರುಗಿದ ಪರೀಕ್ಷೆ ಒಂದು ಹಬ್ಬ ಎಂ

ಬಳ್ಳಾರಿಯ ರಾಮಕೃಷ್ಣಶ್ರಮದ ಜೆಸಿ ರಾಜಶೇಖರ ಹೇಳಿಕೆ: ಪರೀಕ್ಷೆ ಒಂದು ಹಬ್ಬ ಉತ್ತೇಜನಾ ಕಾರ್ಯಕ್ರಮ 

ಮಹಾಲಿಂಗಪುರ ೨೪: ವಿದ್ಯಾರ್ಥಿಗಳು ಮೋಜು ಮಸ್ತಿ ಬದಿಗಿಟ್ಟು, ಶಿಸ್ತಿನ ದಿನಚರಿಯೊಂದಿಗೆ ಕಷ್ಟಪಟ್ಟು ಓದಿ ಇಷ್ಟು ಪಟ್ಟು ಪರೀಕ್ಷೆ ಬರೆದರೆ ರ‍್ಯಾಂಕ್ ಎಂಬುದು ಕಷ್ಟವೇನಲ್ಲ. ಪರೀಕ್ಷೆಯಲ್ಲಿ ಫೇಲಾದರೂ ಜೀವನದಲ್ಲಿ ಓದಿ ಮತ್ತೆ ಪಾಸಾಗುವ ಗಟ್ಟಿ ಮನಸು ಮಾಡಬೇಕೆಂದು ಬಳ್ಳಾರಿಯ ರಾಮಕೃಷ್ಣ ಆಶ್ರಮದ ಜೆಸಿ ರಾಜಶೇಖರ ಹೇಳಿದರು. 

ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕೆಎಲ್‍ಇ ಪಾಲಿಟೆಕ್ನಿಕ್ ಸಹಯೋಗದೊಂದಿಗೆ ಕಾಲೇಜು ಆವರಣದಲ್ಲಿ ಜರುಗಿದ ಪರೀಕ್ಷೆ ಒಂದು ಹಬ್ಬ ಎಂಬ ಉತ್ತೇಜನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ, ಸ್ಪಷ್ಟ ಗುರಿ, ಅಚಲ ಆತ್ಮ ವಿಶ್ವಾಸ ಮತ್ತು ಪ್ರಾಮಾಣಿಕ ಪ್ರಯತ್ನಗಳೇ ಗೆಲುವಿಗೆ ರಹದಾರಿ, ಮಾರ್ಕ್ ಕಡಿಮೆ ಇದ್ದರೂ ರಿಮಾರ್ಕ್ ಕಡಿಮೆಯಾಗದಂತೆ ಬದುಕಬೇಕು ಎಂದು ವಿದ್ಯಾರ್ಥಿಗಳಿಗೆ ಗೆಲವಿನ ರಹಸ್ಯವನ್ನು ತಿಳಿಸಿದರು. 

ಹುಬ್ಬಳ್ಳಿಯ ಕಿಮ್ಸ್ನ ಪ್ರೋ. ಡಾ.ರಾಜೇಶ್ ಹುಣಶ್ಯಾಳ ಮಾತನಾಡಿ, ವಿದ್ಯಾರ್ಥಿಗಳು ಅಪ್ಪ, ಅಮ್ಮ, ಆಹಾರ, ಆರೋಗ್ಯದ ಬಗ್ಗೆ ರಕ್ಷಣೆವಹಿಸುವ ಮೂಲಕ ಸಾಧನೆಗೆ ಸನ್ನದ್ಧವಾಗಬೇಕು ಎಂದರು. 

ಕೆಎಲ್‍ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಭವಿಷ್ಯತ್ತಿನ ಬುನಾದಿಯಾಗಿರುವ ಎಸ್ಸೆಸೆಲ್ಸಿ ಅತಿ ಮುಖ್ಯ ಘಟ್ಟವೆನಿಸಿದೆ. ಈ ಸುವರ್ಣಾವಕಾಶವನ್ನು ಹಾಳು ಮಾಡಿಕೊಳ್ಳದೇ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂದರು. 

ರಬಕವಿಯ ಹಜಾರೆ ಫೌಂಡೇಶನ್ ಮಾಲೀಕ ಸತೀಶ್ ಹಜಾರೆ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು, ಪ್ರತಿಭಾವಂತ ವಿದ್ಯಾರ್ಥಿ ರೋಹಣ ಕದ್ದಿಮನಿ ಹಾಗೂ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ ಅವರನ್ನು ಸನ್ಮಾನಿಸಲಾಯಿತು. 

ಶಾಂತಿಲಾಲ ಪಟೇಲ, ಪ್ರಿಯಾಂಕಾ ನಿಶಾನದಾರ, ಶಿವಾನಂದ ತಿಪ್ಪಾ, ಗುರುರಾಜ ಅರಕೇರಿ, ಶಂಕರ್ ಮುರುಗೋಡ ಹಾಗೂ ಸುತ್ತಲಿನ ಪೌಢಶಾಲೆಯ  ಎಸ್ಸೆಸೆಲ್ಸಿ ವಿದ್ಯಾರ್ಥಿಗಳು ಇದ್ದರು. ಸವಿತಾ ಗೋಂದಿ ನಿರೂಪಿಸಿ ವಂದಿಸಿದರು. 

ಸುದ್ದಿ ಓದಿ