ಬಳ್ಳಾರಿ

ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿ

ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿ


ಬಳ್ಳಾರಿ, ಸೆ.14: ಭಕ್ತಿಯೊಂದಿಗೆ ಪ್ರಕೃತಿಯನ್ನೂ ಗೌರವಿಸಿ, ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವ ಮೂಲಕ ಜಲಮೂಲಗಳನ್ನು ಸಂರಕ್ಷಿಸಿ ಪರಿಸರ ಮಾಲಿನ್ಯ ತಡೆಯಬೇಕು ಎಂದು ಶ್ರೀ ವಾಸವಿ ಎಜುಕೇಷನ್ ಟ್ರಸ್ಟ್ನ ಗೌರವಾನ್ವಿತ ಅಧ್ಯಕ್ಷ ಜಯಪ್ರಕಾಶ್ ಜೆ. ಗುಪ್ತ ಕರೆ ನೀಡಿದರು.  

ನಗರದ ಶ್ರೀ ವಾಸವಿ ವಿದ್ಯಾಲಯದಲ್ಲಿ ನಡೆದ ಗಣೇಶ ಚತುರ್ಥಿ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರ ಜೊತೆಗೆ ಪರಿಸರ ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು. ಮಣ್ಣಿನ ಗಣೇಶ ಮೂರ್ತಿಗಳ ಬಳಕೆಯಿಂದ ಜಲಮಾಲಿನ್ಯ ಕಡಿಮೆ ಮಾಡಿ ಪರಿಸರವನ್ನು ರಕ್ಷಿಸಬಹುದು ಎಂದು ತಿಳಿಸಿದರು.  

ವಿದ್ಯಾರ್ಥಿಗಳು ತಮ್ಮ ಕಲ್ಪನಾ ಶಕ್ತಿ ಹಾಗೂ ಕಲಾತ್ಮಕ ಪ್ರತಿಭೆಯಿಂದ ವಿವಿಧ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ನಿರ್ಮಿಸಿ ಪ್ರದರ್ಶಿಸಿದರು. ಈ ಪ್ರಯತ್ನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಈ ಮೂಲಕ ಪ್ರಕೃತಿ ಸಂರಕ್ಷಣೆ, ನೀರಿನ ಮೂಲಗಳ ಕಾಳಜಿ ಹಾಗೂ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.  

ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಹಾಗೂ ಇಂದಿರಾ ನಗರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ 2026-27ರಲ್ಲಿ ಬಾಲ್ ಬ್ಯಾಡ್ಮಿಂಟನ್ನಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಅತಿಥಿಗಳು ಅಭಿನಂದಿಸಿ ಪ್ರಮಾಣಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಿದರು.  

ಶ್ರೀ ವಾಸವಿ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷ ವಿಠ್ಠಲ ಕೃಷ್ಣಕುಮಾರ್, ಕಾರ್ಯದರ್ಶಿ ಪಿ.ಎನ್‌. ಸುರೇಶ್, ಮುಖ್ಯೋಪಾಧ್ಯಾಯ ವಿರೇಶ್ ಯು., ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 8ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಸಲ್ಲಿಸಿದರು. ಎ.ಸಿ. ಸಿಂಚನ ಸ್ವಾಗತಿಸಿದರು. ಕಾರ್ತಿಕಾ ವಂದನಾರೆ​‍್ಣ ನೆರವೇರಿಸಿದರು. ಮನಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪರಿಸರ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿ ಕುರಿತ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು. 


ಸುದ್ದಿ ಓದಿ