ದಸರಾ ಉದ್ಘಾಟನಾ ಸಮಾರಂಭಕ್ಕೆ ಸಿದ್ದಲಿಂಗ ದೇವರಿಗೆ ಆಹ್ವಾನ
ತಾಳಿಕೋಟಿ 10: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವಂತೆ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಪರಮಪೂಜ್ಯ ಶ್ರೀ ಸಿದ್ಧಲಿಂಗ ದೇವರಿಗೆ ರಾಜ್ಯ ಸರ್ಕಾರದ ಪರವಾಗಿ ಅಧಿಕೃತ ಆಹ್ವಾನ ನೀಡಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್. ತಂಗಡಗಿ ಅವರು ಮುಖ್ಯಮಂತ್ರಿಗಳ ಅಪೇಕ್ಷೆಯ ಮೇರೆಗೆ ಶ್ರೀ ಸಿದ್ಧಲಿಂಗ ದೇವರಿಗೆ ಆಹ್ವಾನ ಪತ್ರ ಕಳುಹಿಸಿಕೊಟ್ಟಿದ್ದಾರೆ.
ಮೈಸೂರು ದಸರಾ ಮಹೋತ್ಸವವು ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಜನಪದ ವೈಭವವನ್ನು ವಿಶ್ವದಾದ್ಯಂತ ಪರಿಚಯಿಸುವ ನಾಡಹಬ್ಬವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 11ರಂದು ಭಾನುವಾರ ಬೆಳಿಗ್ಗೆ 11.50ಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಅಗ್ರಪೂಜೆಯೊಂದಿಗೆ ನೆರವೇರಲಿದೆ ಎಂದು ಆಹ್ವಾನ ಪತ್ರದಲ್ಲಿ ತಿಳಿಸಲಾಗಿದೆ.