ಸರಕಾರಿ ಇಲಾಖೆಗಳಲ್ಲಿ ಶಾಸಕರ ಹಸ್ತಕ್ಷೇಪ ಮತಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ
ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ವಿರುದ್ಧ ಪರೋಕ್ಷವಾಗಿ ಮಾಜಿ ಸಚಿವ ಸಿ ಎಸ್ ನಾಡಗೌಡ ವಾಗ್ದಾಳಿ
ಮುದ್ದೇಬಿಹಾಳ 27: ಎಲ್ಲ ಸರಕಾರಿ ಇಲಾಖೆಗಳಲ್ಲಿ ಸ್ಥಳೀಯ ಶಾಸಕರು ಹಸ್ತಕ್ಷೇಪ ಮಾಡುವ ಮೂಲಕ ಮತಕ್ಷೇತ್ರದಲ್ಲಿ ನೂರಾರು ಕೋಟಿ ರೂಗಳ ಹಣ ದುರುಪಯೋಗಗೊಂಡಿದೆ ಮಾತ್ರವಲ್ಲದೇ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ಮಾಧ್ಯಮಗಳ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ವಿರುದ್ಧ ಪರೋಕ್ಷವಾಗಿ ಎಂದು ಮಾಜಿ ಸಚಿವ ಸಿ ಎಸ್ ನಾಡಗೌಡ ವಾಗ್ದಾಳಿ ನಡೆಸಿದರು.
ಪಟ್ಟಣದ ಪುರಸಭೆ ಎದುರು ಮುಖ್ಯಾಧಿಕಾರಿ ದುರಾಢಳಿತವನ್ನು ಖಂಡಿಸಿ ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಶಿವಪುರಿ, ಸದಸ್ಯ ಮೈಬೂಬ ಗೊಳಸಂಗಿಯವರ ನಡೆಸುತ್ತಿರುವ ಕಪ್ಪು ಬಟ್ಟೆ ಪ್ರದರ್ಶಿ ಅರೆಬೆತ್ತಲೆ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಸತ್ಯಾಗ್ರಹವನ್ನು ಬೆಂಬಲಿಸಿ ಅವರು ಮಾತನಾಡಿದರು.
ಪುರಸಭೆ, ಪಂಚಾಯಿತಿ ವ್ಯಾಪ್ತಿಯಲ್ಲೂ ಹಸ್ತಕ್ಷೇಪ ಮಾಡಿ ಆಡಳಿತ ನಡೆಯುತ್ತಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೋರಾಟಗಾರರಿಗೆ ನಿಮ್ಮನ್ನು ಒಳಗೆ ಹಾಕುತ್ತೇವೆ.ಎದ್ದು ಹೋಗಿ ಎನ್ನುವ ಅಧಿಕಾರ ಪೊಲೀಸರಿಗೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ಹೋರಾಟ ಎಲ್ಲರೂ ನಡೆಸಬಹುದಾಗಿದೆ. ಅಧಿಕಾರಿಗಳು ಶಾಸಕರು ಹೇಳಿದರೆಂದು ಅದನ್ನು ಮಾಡುವುದಲ್ಲ. ಸಂವಿಧಾನದ 73,74 ತಿದ್ದುಪಡಿ ಪ್ರಕಾರ ಶಾಸಕರಿಗೆ ವಿಧಾನಸಭೆಯಲ್ಲಿ ಶಾಸನ ಮಾಡುವುದರಲ್ಲಿ,ಯೋಜನೆ ಮಾಡುವ ಅಧಿಕಾರ ಇದೆ.ಆದರೆ ಹಣ ಪುರಸಭೆ, ಪಂಚಾಯಿತಿಗಳಿಗೆ ಬಳಕೆಯ ಬಗ್ಗೆ ಅಲ್ಲಿಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು.ಆದರೆ ಏಕರೂಪವಾಗಿ ನಿರ್ಧರಿಸುವುದು ಸರಿಯಲ್ಲ. ನಗರೋತ್ಥಾನ ಯೋಜನೆಗೆ ಸಂಬಂಧಿಸಿದಂತೆ ಪುರಸಭೆ ಅಧ್ಯಕ್ಷೆ ಸದಸ್ಯರಾಗಿರುತ್ತಾರೆ. ತೆರಿಗೆದಾರರ ಹಣ ತಂದು ಇಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಸಣ್ಣಪುಟ್ಟ ವಿಷಯಗಳಿಗೆ ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಿದರೆ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.
ಮುಖ್ಯಾಧಿಕಾರಿ ಚರ್ಚೆ ಇಲ್ಲದೇ ಅನುಮೋದನೆ ಕೊಡುವುದು ಕಾನೂನು ಬಾಹಿರವಾದದು.ಅವರಿಗೆ ಅಧಿಕಾರ ಯಾರು ಕೊಟ್ಟಿದ್ದಾರೆ. ಮುಖ್ಯಾಧಿಕಾರಿ ತುರ್ತು ಕಾಮಗಾರಿ ಮಾಡಲು 10 ಸಾವಿರ ರೂ.ಗಳವರೆಗೆ ಖರ್ಚು ಮಾಡಲು ಅನುಮತಿ ಇದೆ.ಆದರೆ ಇಲ್ಲಿ ಅದೆಲ್ಲಾ ನಡೆಯುವುದಿಲ್ಲ. ಮುಖ್ಯಾಧಿಕಾರಿಯೇ 2.75 ಲಕ್ಷ ರೂ.ಪಾವತಿಯನ್ನು ತಮ್ಮ ಸಂಬಂಧಿಕರ ಹೆಸರಿನಲ್ಲಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡದೇ ಹಣ ಪಾವತಿ ಮಾಡುತ್ತಾರೆ ಎಂದರೆ ಜಿಲ್ಲಾಧಿಕಾರಿಗಳು,ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇದರ ಬಗ್ಗೆ ಗಮನ ಹರಿಸಬೇಕು. ಆಡಳಿತದಲ್ಲಿರುವವರು ಗಮನಿಸಬೇಕು. ಅಧಿಕಾರಿಗಳು ಯಾರ ಕೈಗೊಂಬೆಯಾಗದೇ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಉಪಾಧ್ಯಕ್ಷೆ ಶಹಜಾದಬಿ ಹುಣಸಗಿ, ಮುಖಂಡ ರುದ್ರಗೌಡ ಅಂಗಡಗೇರಿ, ಕಾಮರಾಜ ಬಿರಾದಾರ, ವಾಯ್.ಎಚ್.ವಿಜಯಕರ್, ಮಹ್ಮದರಫೀಕ ಶಿರೋಳ, ಸದ್ದಾಂ ಕುಂಟೋಜಿ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶೆಳ್ಳಗಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಸದಸ್ಯರು, ಪುರಸಭೆ ಮಾಜಿ ಸದಸ್ಯರು, ಕಾರ್ಯಕರ್ತರು ಇದ್ದರು.
ಕೆಲಸ ಮಾಡದೇ ಬಿಲ್ ಪಾಸ್: ಮತ್ತೆ ಅದೇ ಕೆಲಸಕ್ಕೆ ಟೆಂಡರ್..!
ಪಿಆರ್ಎಎಂಸಿ ಶೀರ್ಷಿಕೆಯಲ್ಲಿ ಫೆ.14,2022ರಂದು ಐದು ಕೋಟಿ ರೂ.ಗಳ ಕೆಲಸವನ್ನು ಶಾಸಕರ ಸಂಬಂಧಿಕರಾದ ಬಸವರಾಜ ಬಿರಾದಾರ ಎಂಬುವರಿಗೆ ನೀಡಲಾಗಿದೆ. ವಾಸ್ತವದಲ್ಲಿ ಕ್ಲಾಸ್-2 ಗುತ್ತಿಗೆ ಕೆಲಸದ ಅನುಭವ ಇರುವ ಈ ವ್ಯಕ್ತಿಯ ಹೆಸರಿನಲ್ಲಿ ಐದು ಕೋಟಿ ರೂ.ಟೆಂಡರ್ ನೀಡಲಾಗಿದ್ದು ರಾಜ್ಯ ಹೆದ್ದಾರಿ ಸಂಖ್ಯೆ 41ರ 147 ಕಿ.ಮೀದಿಂದ 148.5 ಕಿ.ಮೀವರೆಗಿನ ಬನಶಂಕರಿ ಸರ್ಕಲ್ದಿಂದ ಇಂದಿರಾ ಸರ್ಕಲ್ದವರೆಗೆ ವಾಯಾ ನಾರಾಯಣಪೂರ ರಸ್ತೆ ಕಾಮಗಾರಿ ಇದ್ದು ಇಲ್ಲಿ ಯಾವುದೇ ಕೆಲಸ ಆಗದಿದ್ದರೂ ಅವರಿಗೆ ಬಿಲ್ ಸಂದಾಯ ಮಾಡಲಾಗಿದೆ. ಅಲ್ಲದೇ ಮತ್ತೆ ಇದೇ ರಸ್ತೆಯ ಸುಧಾರಣೆಗೆಂದು ಶಿರಾಡೋಣ-ಲಿಂಗಸ್ಗೂರು 5054 ಹೆಡ್ನಲ್ಲಿ ಅಪೆಂಡಿಕ್ಸ್ ಇ 2021-22ರ ಯೋಜನೆ ಅಡಿಯಲ್ಲಿ ಜೂ.27 ರಂದು 5.38 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಸಲ ಟೆಂಡರ್ ಕರೆಯಲಾಗಿದೆ. ಕೆಲಸವೇ ಆಗಿರದಿದ್ದರೂ ಬಿಲ್ ಎತ್ತಿರುವುದು ಹಾಗೂ ಅದೇ ಕೆಲಸಕ್ಕೆ ಮತ್ತೊಮ್ಮೆ ಅಲ್ಲಿ ರೋಡ್ ಮಾಡಿಸುವ ಸಲುವಾಗಿ ಮತ್ತೊಮ್ಮೆ ಟೆಂಡರ್ ಕರೆದಿರುವುದು ಸೇರಿದಂತೆ ಕ್ಷೇತ್ರದಲ್ಲಿ ಹೀಗೆ ನೂರಾರು ಕೋಟಿ ರೂ.ಅನುದಾನವನ್ನು ಲೂಟಿ ಮಾಡಲಾಗಿದೆ ಎಂದು ಮಾಜಿ ಶಾಸಕ ನಾಡಗೌಡರು ಆರೋಪಿಸಿದರು.
ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇವೆ ಇಲ್ಲಿ ತನಿಖೆ ನಡೆಸಬೇಕು.ನೀರಾವರಿ,ಎಎಸ್ಸಿಪಿ,ಟಿಎಸ್ಪಿ,ಮನೆ ಹಂಚಿಕೆಯಲ್ಲಿ ಹಸ್ತಕ್ಷೇಪ,ಎನ್.ಆರ್.ಇ.ಜಿ ಯೋಜನೆ ಕಾಮಗಾರಿ ಮಾಡುವುದರಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೀರಿ.ಸಿದ್ದರಾಮಯ್ಯ ಸಿಎಂ ಇದ್ದಾಗ ನಾವು ಐದು ವರ್ಷಗಳಲ್ಲಿ 8500 ಮನೆಗಳನ್ನು ಮಂಜೂರಾತಿ ಮಾಡಿದ್ದೇವೆ.ಇವರು ಬಂದ ಮೇಲೆ ಅವುಗಳಲ್ಲಿ ಕೆಲವನ್ನು ರದ್ದು ಮಾಡಿ ನಿಲ್ಲಿಸಿದ್ದಾರೆ.ಯಾರಿಗಾದರೂ ಮನೆ ಕೊಟ್ಟಿದ್ದಾರಾ ? ಎಂದು ಮಾಜಿ ಶಾಸಕರು ಪ್ರಶ್ನಿಸಿದರು.
ದೇವರನ್ನು ಸ್ಮರಿಸಿ ಹೇಳುತ್ತೇನೆ ಯಾರ ಮನೆತನದಲ್ಲೂ ನಾನು ಕೈ ಹಾಕಿಲ್ಲ. ಒಡೆಯುವ ಪ್ರಯತ್ನ ಮಾಡುವುದಿಲ್ಲ.ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂಬಂತೆ ಆ ಸಂಸ್ಕೃತಿ ನಮಗೆ ಗೊತ್ತಿಲ್ಲ.ಅವರು ಮಾಡಿರುತ್ತಾರೆ. ಅವರ ಕುಟುಂಬದಲ್ಲಿಯೇ 50-60 ಇಂತಹ ಪ್ರಕರಣಗಳಾಗಿರಬಹುದು.ನಾನೇ ಎಷ್ಟೋ ಸಲ ಬುದ್ಧಿ ಹೇಳಿ ಹೋಗಿ ನಿಮ್ಮಣ್ಣನ ಕಾಲು ಹಿಡಿದುಕೊಳ್ಳಿ ಸರಿ ಆಗುತ್ತೀರಿ ಎಂದು ಹೇಳಿದ್ದೇನೆ. ಒಂದು ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬಂದರೆ ಏನು ಆಗುತ್ತದೆ ಎಂಬುದರ ಪರಿಣಾಮ ನಾನು ಅನುಭವಿಸಿದ್ದೇನೆ. ನಾನು ಅವರಿಂದ ಈ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕಾಗಿಲ್ಲ.
-ಮಾಜಿ ಶಾಸಕ ನಾಡಗೌಡರು
ಪುರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳನ್ನು ಆನ್ ಲೈನ್ ಮೂಲಕ ಹರಾಜು ಪ್ರಕ್ರೀಯೆ ನಡೆಸಬೇಕು ಎಂಬುದು ಎಲ್ಲ ಸದಸ್ಯರ ಅಭಿಪ್ರಾಯವಾಗಿದೆ ಆದರೇ ಮುಖ್ಯಾಧಿಕಾರಿಗಳು ರಿಂಗ ಮೂಲಕ ಹರಾಜು ನಡೆಸುತ್ತಿದ್ದಾರೆ ಇದು ಸರಿಯಲ್ಲ ಎಂದಿದ್ದು ತಪ್ಪಾ. ಪುರಸಭೆ ಆಡಳಿತ ಮಂಡಳಿಯ ಗಮನಕ್ಕೂ ಬಾರದೆ ಮುಖ್ಯಾಧಿಕಾರಿಗಳು ಏಕ ಪಕ್ಷೀಯ ನಿರ್ಧಾರ ಕೈಗೊಳ್ಳುವ ಸರಿಯಾದುದಲ್ಲ ಎಂಬುದುನ್ನು ಅರಿತು ನಡೆಯಬೇಕು.