ಹಾಲು ಉತ್ಪಾದನೆಗೆ ಉತ್ತೇಜನಕ್ಕಾಗಿ ಕೆಎಂಎಫ್ ನಿಂದ ಬಡ್ಡಿರಹಿತ ಸಾಲ ಭಾಗ್ಯ ಯೋಜನೆ : ವಿವೇಕರಾವ್ ಪಾಟೀಲ

ಹಾಲು ಉತ್ಪಾದನೆಗೆ ಉತ್ತೇಜನಕ್ಕಾಗಿ ಕೆಎಂಎಫ್ ನಿಂದ ಬಡ್ಡಿರಹಿತ ಸಾಲ ಭಾಗ್ಯ ಯೋಜನೆ  : ವಿವೇಕರಾವ್ ಪಾಟೀಲ

ಬೆಳಗಾವಿ : ಜಿಲ್ಲೆಯಲ್ಲಿ ಆವರಿಸಿದ್ದ ಚರ್ಮಗಂಟು ರೋಗದಿಂದ ಹಾಲು ಉತ್ಪಾದನೆ ಕುಂಟಿತವಾಗಿದ್ದು, ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಾಗೂ ಹೈನುಗಾರಿಕೆ ಮಾಡುವರಿಗೆ ಸಹಾಯ ಹಸ್ತ ನೀಡಿ ಹಾಲು ಉತ್ಪಾದನೆ ಹೆಚ್ವಿಸುವ ನಿಟ್ಟಿನಲ್ಲಿ ರೈತರಿಗೆ 50 ಸಾವಿರ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲು ಕೆಎಂಎಫ್ ನಿರ್ಧರಿಸಿದೆ ಎಂದು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ‌ ಸಂಘಗಳ ಒಕ್ಕೂಟದ ಅಧ್ಯಕ್ಷ ವಿವೇಕರಾವ್ ಪಾಟೀಲ ಇಂದಿಲ್ಲಿ ಹೇಳಿದರು.

     ಮಂಗಳವಾರ ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು‌, ಇತ್ತೀಚೆಗೆ ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡು ಜಿಲ್ಲೆಯಲ್ಲಿ ಸುಮಾರು 7 ಸಾವಿರ ಹಸುಗಳು ಮೃತಪಟ್ಟಿವೆ. ಇದು ರಾಜ್ಯದಲ್ಲಿ ಎರಡನೇ ಜಿಲ್ಲೆಯಲ್ಲಿ ಬೆಳಗಾವಿ ಬರುತ್ತದೆ. ಇದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗಿದೆ ಎಂದರು.

     ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಾಗ ಹಸುಗಳನ್ನು ಮಾರಾಟ ಮಾಡಿದ ರೈತರು ಮತ್ತೇ ಹೈನುಗಾರಿಕೆ ಮಾಡಲು ಹಿಂದೆಟ್ಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಪ್ರತಿ ಸೊಸೈಟಿಗೆ ಐದು ಲಕ್ಷ ರೂ.ಗಳನ್ನು ಕೆಎಂಎಫ್ ನಿಂದ ನೀಡಲಾಗುತ್ತಿದೆ. ಸೊಸೈಟಿಗೆ ಹೆಚ್ಚು ಹಾಲು ಕಳುಹಿಸುತ್ತಿದ್ದ ರೈತರು ಹಸು ಖರೀದಿಸಲು ಮುಂದು ಬಂದರೆ ಸೊಸೈಟಿಯಿಂದ ಹಸು ಖರೀದಿಸಲು 50 ಸಾವಿರ ರೂ. ಬಡ್ಡಿ ರಹಿತ ಸಾಲ ನೀಡಲಾಗುವುದು. ಇದರ ಲಾಭವನ್ನು ರೈತರು ಸದುಪಯೋಗ ಪಡೆಸಿಕೊಂಡು ಹೆಚ್ಚು ಹೆಚ್ಚು ಹಾಲನ್ನು ಸೊಸೈಟಿಗೆ ನೀಡಿ ಆರ್ಥಿಕವಾಗಿ ಮುಂದೆ ಬರಲು ಅನಕೂಲವಾಗುತ್ತದೆ ಎಂದರು.

   ಈ ಯೋಜನೆಯಿಂದ ಹಾಲು ಉತ್ಪಾದನೆಯಲ್ಲಿ ಸಹಜವಾಗಿ ಹೆಚ್ಚಳವಾಗುತ್ತದೆ. ಇದರಿಂದ ಹೈನು ಉತ್ಪಾದನೆಯನ್ನು ವೃದ್ಧಿಸಿ ಸಂಘದ ಹಾಲು ಶೇಖರಣೆ ಹೆಚ್ಚಾಗಿ ರೈತರು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತದೆ ಎಂದರು.

    ಇದೇ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ಕಡೆಗಳಲ್ಲಿ ಕೆಮಿಕಲ್‌ ಮಿಶ್ರಿತ ಹಾಲು ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸಂಬಂಧಿಸಿದ ಪುರಸಭೆ ಹಾಗೂ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಅಂಥ ಘಟಕಗಳ ಮೇಲೆ ದಾಳಿ ಮಾಡಬೇಕು. ಇಲ್ಲದಿದ್ದರೆ ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬಿರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನಾನು ಕೆಎಂಎಫ್ ಅಧ್ಯಕ್ಷನಾಗಿದ್ದ ವೇಳೆ ಬೆಳಗಾವಿಯಲ್ಲಿಯೇ ಮೇಘಾ ಹಾಲಿನ ಡೈರಿ ಸ್ಥಾಪನೆ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದೆ. ಆದರೆ ಅದಕ್ಕೆ ಜಾಗೆಯ ಕೊರತೆ ಇದೆ. ಜಾಗೆ ಸಿಕ್ಕರೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಬೆಳಗಾವಿಯಲ್ಲಿ ಮೇಘಾ ಡೈರಿ ಪ್ರಾರಂಭಿಸಲು ಶ್ರಮಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸುದ್ದಿ ಓದಿ