ವಿವಿ ಕುಲಪತಿಯಿಂದ ಎಸ್.ಸಿ ಎಸ್.ಟಿ ವಿದ್ಯಾರ್ಥಿಗಳ ಅವಹೇಳನೆ
ಕುಲಪತಿ ವಜಾಕ್ಕೆ ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ರಘು ಸಿ ಅಗ್ರಹ
ಬಳ್ಳಾರಿ 28: ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡ ಇಲಾಖೆಯಿಂದ ನೀಡುವ ಪ್ರೈಜ್ ಮನಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಆನ್ಲೈನ್ ಅಂಕಪಟ್ಟಿಯನ್ನು ರುಜುವಾತು ಸಹಿ ಮಾಡಿಸಿಕೊಳ್ಳಲು ಹೋದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಕುರಿತು ‘ನಿಮಗೆ ಇನ್ನೆಷ್ಟು ದಿನ ಮೀಸಲಾತಿ ಬೇಕು, ಕಳೆದ ಎಪ್ಪತ್ತು ವರ್ಷದಿಂದ ನೀವು ಮೀಸಲಾತಿಯಲ್ಲಿ ಬದುಕುತ್ತಿದ್ದೀರಾ, ಅಂಬೇಡ್ಕರ್ ಕೇವಲ ಹತ್ತು ವರ್ಷಗಳ ಕಾಲ ಮಾತ್ರ ಮೀಸಲಾತಿಯನ್ನು ಕಲ್ಪಿಸಿದ್ದರೂ ಆದರೆ ನೀವು ಇಲ್ಲಿಯವರೆಗೂ ಅವರ ಹೆಸರನ್ನು ಹೇಳಿಕೊಂಡು ಬದುಕುತ್ತಿದ್ದೀರಲ್ಲಾ ನಾಚಿಕೆ ಯಾಗುವುದಿಲ್ಲವೇ, ಬಾಯಿ ಮುಚ್ಚಿಕೊಂಡು ಪೀಜ್ ಕಟ್ಟಿ ಅಂಕಪಟ್ಟಿಯನ್ನು ತೆಗೆದುಕೊಂಡು ಹೋಗಿ ಎಂದು ಕೃಷ್ಣ ದೇವರಾಯ ವಿಶ್ವ ವಿದ್ಯಾಯಲದ ಪ್ರಭಾರಿ ಕುಲಪತಿ ಡಾ. ಅನಂತ್ ಝಂಡೆಕರ್ ಅವರು ವಿದ್ಯಾರ್ಥಿಗಳನ್ನು ಹೀಯಾಳಿಸಿ ಕಳಿಸಿರುತ್ತಾರೆ ಇವರನ್ನು ಕೂಡಲೇ ಉನ್ನತ ಶಿಕ್ಷಣ ಸಚಿವರು ಪ್ರಭಾರಿ ಕುಲಪತಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಾಕ್ಷ ರಘು ಸಿ ಅಗ್ರಹಿಸಿದ್ದಾರೆ.
ಅವರು ಇಂದು ಭೀಮ್ ಅರ್ಮಿ ಸಂಘಟನೆಯಿಂದ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಕುಲಪತಿಗಳು ಈ ಹಿಂದೆ ಹಲವಾರು ಜನ ವಿದ್ಯಾರ್ಥಿಗಳಿಗೆ ಹಾಲ್ಟಿಕೆಟ್ ನೀಡಲು ಸಹ ಸತಾಯಿಸುತ್ತಿದ್ದರು, ನಮ್ಮ ಸಂಘಟನೆ ಮಧ್ಯ ಪ್ರವೇಶ ಮಾಡಿ ಮನವಿ ಮಾಡಿದಾಗ ಸುಮಾರು 400 ರಿಂದ 500 ವಿದ್ಯಾರ್ಥಿಗಳ ಹಾಲ್ ಟಿಕೆಟ್ ನೀಡಿದ್ದರು. ಇಲ್ಲಿಯವರೆಗೂ ಮಾರ್ಕ್ಸ್ ಕಾರ್ಡ್ ಬರದೇ ಇದ್ದ ಕಾರಣ ಕೋರ್ಸ್ ಮುಗಿಸಿದ ಈ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮತ್ತು ಉದ್ಯೋಗಕ್ಕಾಗಿ ಆನ್ಲೈನ್ ಅಂಕಪಟ್ಟಿಯನ್ನು ರುಜುವಾತು ಪಡಿಸಿಕೊಡಲು ಕೇಳಿಕೊಂಡಾಗ ಕೆಲ ವಿದ್ಯಾರ್ಥಿಗಳನ್ನು ಜಾತಿ ಹಿಡಿದು ಬೈದಾಡಿರುತ್ತಾರೆ ಮತ್ತು ಬೆದರಿಕೆ ಹಾಕಿ ಕಳಿಸಿರುತ್ತಾರೆ ವಿಶ್ವ ವಿದ್ಯಾಲಯವೇನು ಇವರ ಪಿತ್ರಾರ್ಜಿತ ಆಸ್ತಿಯೇ ಎಂದು ಕಿಡಿಕಾರಿದರು.
ವಿಶ್ವ ವಿದ್ಯಾಲಯದ ನಿಯಾಮವಳಿ ಪ್ರಕಾರ ನಾಲ್ಕು ಸೆಮಿಷ್ಟರ್ ಮುಗಿದ ನಂತರ ಅಸಲಿ ಅಂಕಪಟ್ಟಿ ಪಡೆಯಬೇಕಾದ ಸಮಯದಲ್ಲಿ ಬಾಕಿಯಿರುವ ಎಲ್ಲಾ ಶುಲ್ಕವನ್ನು ಕಟ್ಟತಕ್ಕದ್ದು ಎಂದಿರುತ್ತದೆ, ಈ ಕನಿಷ್ಠ ಜ್ಞಾನ ಸಹ ಕುಲಪತಿ ಝಂಡೆಕರ್ಗೆ ಇಲ್ಲದಿರುವುದು ದುರದೃಷ್ಟಕರ, ಝಂಡೇಕರ್ ಸಹ ಅಂಬೇಡ್ಕರ್ ಸಂವಿಧಾನದಲ್ಲಿರುವಂತೆ ಮೀಸಲಾತಿಯಲ್ಲಿ ನೇಮಕವಾಗಿದ್ದನ್ನು ಮರೆಯಬಾರದೆಂದು ವ್ಯಂಗ್ಯವಾಡಿದರು.
ಆಂಶುಮಲಿ ಎಂಬ ಇಂಡಿಸ್ಟ್ರೀಯಲ್ ಕೆಮೆಷ್ಟ್ರಿ ವಿಭಾಗದ ಮುಖ್ಯಸ್ಥ ಇವರು ಆನ್ಲೈನ್ ಅಂಕಪಟ್ಟಿಯನ್ನು ಅಟೆಸ್ಟೆಡ್ ಮಾಡಿಕೊಡುವಂತೆ ಕೇಳಿಕೊಂಡರೆ ನನಗೆ ಆ ಅಧಿಕಾರವಿಲ್ಲ ಎಂದು ವಿದ್ಯಾರ್ಥಿಗಳನ್ನು ಸತಾಯಿಸುತ್ತಾರೆ, ಮಾಡಿಕೊಟ್ಟರೂ ಸಹ ಅದರ ಮೇಲೆ ಷರಾ ಬರೆದು ವಿದ್ಯಾರ್ಥಿಗಳಿಗೆ ತೊಂದರೆ ಮಾಡುತ್ತಿದ್ದಾರೆ. ಅಸಲಿಗೆ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳನ್ನು ಬಹಳ ಕೀಳಾಗಿ ಕಾಣಲಾಗುತ್ತಿದೆ. ಇದನ್ನು ಪ್ರಶ್ನಿಸಿದವರನ್ನು ಆಂತರಿಕ ಅಂಕಗಳನ್ನು ಕಡಿಮೆ ಹಾಕಿ ಫೆೇಲ್ ಮಾಡುವ ಬೆದರಿಕೆ ಹಾಕುತ್ತಾರೆ. ಇಂಥವರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೂರು ಸೆಮ್ಗಳಲ್ಲಿ ಶೇಕಡ 60-70 ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅವರ ಚಾಕರಿ ಮಾಡಲಿಲ್ಲ ಎಂಬ ಕಾರಣಕ್ಕೆ 70ಕ್ಕೆ ಕೇವಲ 3,5,7,9 ಹೀಗೆ ಅತ್ಯಂತ ಕಡಿಮೆ ಅಂಕಗಳನ್ನು ನೀಡಿ ಅವರ ಚೇಲಾಗಳಿಗೆ ರಾ್ಯಂಕ್ ಕೊಡಿಸುವುದು ಮಾಡುತ್ತಾರೆ. ಮತ್ತು ಫೇಲಾದ ವಿದ್ಯಾರ್ಥಿಗಳನ್ನು ಕರೆದು ಒಪ್ಪಂದ ಮಾಡಿಕೊಂಡು ಮೇಲ್ಕಂಡ ಸಂಖ್ಯೆಗಳ ಹಿಂದೆ ಮುಂದೆ 0 ಯನ್ನೋ ಅಥವಾ ಮತ್ತೊಂದು ಸಂಖ್ಯೆಯನ್ನು ಬರೆದು ಪಾಸ್ ಮಾಡಿರುತ್ತಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವೀರೇಶ್ ನಾಯಕ್, ಉಮೇಶ್, ನಾಗರಾಜ್, ನಂಜುಡೇಶ್ವರ, ನಂದೀಶ್, ಕೇದಾರ್ ಸೇರಿದಂತೆ ಇತರರಿದ್ದರು.