ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ
ಮಹಾಲಿಂಗಪುರ 09: ಮಕ್ಕಳಲ್ಲಿಯ ಸುಪ್ತಗೊಂಡ ಪ್ರತಿಭೆಗೆ ಕೇಂದ್ರ ಸರಕಾರ ಆರಂಭಿಸಿದ ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮ ಅಡಿಯಲ್ಲಿ ಸ್ಥಳೀಯ ಕೆಎಲ್ಇ ಸಂಸ್ಥೆ ಎಸ್ಸಿಪಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಲಭಿಸಿದೆ.
9ನೇ ತರಗತಿಯ ಪ್ರಜ್ಞಾ ಮನೀಷ್ ಬೆಳಗಾಂವಕರ್ ಮತ್ತು ಲಕ್ಷೀ ಸೋಮನಾಥ ಬಂಡಿ ಇನ್ಸ್ಪೈರ್ ಅವಾರ್ಡ್ಗೆ ಆಯ್ಕೆಯಾದ ವಿದ್ಯಾರ್ಥಿನಿಯರು.
ವಿದ್ಯಾರ್ಥಿಗಳು ಇನ್ಸ್ಪೈರ್ ಅವಾರ್ಡ್ ಮಾನಕ್ ವೆಬ್ ಪೋರ್ಟಲ್ನಲ್ಲಿ ತಮ್ಮ ಯೋಜನೆಗಳನ್ನು ಅಪ್ಲೋಡ್ ಮಾಡಿದ್ದರು. ಪ್ರತಿ ಯೋಜನೆಯ ಮಾದರಿ ತಯಾರಿಸಲು ಕೇಂದ್ರ ಸರ್ಕಾರದ ಸಂಬಂಧಿಸಿದ ಇಲಾಖೆ ತಲಾ 10 ಸಾವಿರ ರೂ.ಗಳಂತೆ ಒಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ 20 ಸಾವಿರ ರೂ.ಗಳನ್ನು ಕೊಡಮಾಡಿದೆ.
ವಿದ್ಯಾರ್ಥಿನಿಯರು ಈ ಪ್ರೋತ್ಸಾಹ ಧನ ಉಪಯೋಗಿಸಿ ಯೋಜನೆಯ ಮಾದರಿಯನ್ನು ತಯಾರಿಸಿಕೊಂಡು ದೇಶದ ಯಾವುದೇ ಮೂಲೆಯಲ್ಲಿ ಇವುಗಳ ಪ್ರದರ್ಶನಕ್ಕೆ ಇಲಾಖೆ ಅವಕಾಶ ಕಲ್ಪಿಸುತ್ತದೆ ಮತ್ತು ಇಲ್ಲಿಯೂ ಆಯ್ಕೆ ಪ್ರಕ್ರಿಯೆ ನಡೆದು ಉತ್ತಮ ಪ್ರಾಶಸ್ತ್ಯಕ್ಕೆ ಅವಾರ್ಡ್ ಸಹ ಕೊಡ ಮಾಡುತ್ತಾರೆ ಎಂದು ಶಾಲಾ ವ್ಯವಸ್ಥಾಪಕ ಮಂಡಳಿ ತಿಳಿಸಿದೆ.