ಮಹಲಿಂಗಪುರ

ರಂಗಮಂದಿರ ಜೀವಂತ ದೇವಾಲಯ: ಬಸವರಾಜ ಹೂಗಾರ

ರಂಗಮಂದಿರ ಜೀವಂತ ದೇವಾಲಯ: ಬಸವರಾಜ ಹೂಗಾರ

ಮಹಾಲಿಂಗಪುರ 13: ರಂಗಮಂದಿರವೆಂದರೆ ಜೀವಂತ ದೇವಾಲಯವಿದ್ದಂತೆ ಇದರ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಎಂದು ಗುತ್ತಿಗೆದಾರರಿಗೆ ಬೆಳಗಾವಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ತಿಳಿಸಿದರು. 

ನಗರದ ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲಿ ಪಾರಿಜಾತ ಕಲಾವಿದೆ ದಿ.ಕೌಜಲಗಿ ನಿಂಗಮ್ಮ ಅವರ ಹೆಸರಿನಲ್ಲಿ ಅಂದಾಜು ಮೊತ್ತ 3.5 ಕೋಟಿಯಲ್ಲಿ ತಲೆ ಎತ್ತುತ್ತಿರುವ 350 ಆಸನಗಳ ಭವ್ಯ ರಂಗಮಂದಿರದ ಕಾಮಗಾರಿ ಅಭಿವೃದ್ಧಿ ಕಾರ್ಯವನ್ನು ವೀಕ್ಷಿಸಿ ಮಾತನಾಡಿದರು. 

ಶತಮಾನದಿಂದ ನಾಡಿನಾದ್ಯಂತ ದಿ. ಕೌಜಲಗಿ ಅಮ್ಮನವರ ಮೂಲಕ ಶ್ರೇಷ್ಠಾತಿಶ್ರೇಷ್ಠ ಜಾನಪದ ಪಾರಿಜಾತ ಕಲೆ ಅಥವಾ ಪರಂಪರೆ ಮುಂದುವರೆದು ಬಂದಿದೆ. ಆದ್ದರಿಂದ ಇವರ ಗೌರವಾರ್ಥ ಸುತ್ತಮುತ್ತಲಿನ ಕಲಾವಿದರು, ಸಾಹಿತಿಗಳು ಹಾಗೂ ಕಲಾ ಪೋಷಕರಿಗೆ ಅಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಘನ ಕರ್ನಾಟಕ ಸರ್ಕಾರ ದಿ. ಕೌಜಲಗಿ ನಿಂಗಮ್ಮ ಅವರ ಹೆಸರಿನಲ್ಲಿ ಭವ್ಯ ರಂಗಮಂದಿರ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಕಾಮಗಾರಿ ಪ್ರತಿಶತ 90ರಷ್ಟು ಮುಗಿದಿದ್ದು ಇನ್ನುಳಿದ ಕೆಲಸವನ್ನು ಬರುವ ಎರಡು ತಿಂಗಳುಗಳಲ್ಲಿ ಮುಗಿಸಿಕೊಡಲು ಅಲ್ಲಿಯೆ ಇದ್ದ ಪಿಡಬ್ಲ್ಯೂಡಿ ಇಲಾಖೆಯ ಎ.ಡಬ್ಲ್ಯೂ.ಇ ಎಸ್‌.ಎಸ್ ಸಾವನ್ ಅವರಿಗೆ ಸೂಚಿಸಿದರು.  

ರಂಗ ಮಂದಿರದ ಕಾಮಗಾರಿಯಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದು ಅವುಗಳನ್ನು ದುರಸ್ತಿಗೊಳಿಸಲು ತಿಳಿಸಿದರು. ವಾತಾವರಣಕ್ಕೆ ಅನುಗುಣವಾದ ಆಸನಗಳು, ಸುಸಜ್ಜಿತ ಶೌಚಾಲಯ, ಸೌಂಡ್ ಆಪರೇಟಿಂಗ್ ಸಿಸ್ಟಮ್, ಶಬ್ದ ರಹಿತ ಫ್ಯಾನ್ಗಳು, ರಂಗಮಂದಿರಕ್ಕನುಗುನವಾಗಿ ಮುಖ್ಯ ವೇದಿಕೆ ರಚನೆ, ಪಾಕಿಂರ್ಗ್, ಸಾರ್ವಜನಿಕವಾಗಿ ಹಾಗೂ ಇನ್ನಿತರ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸೂಚಿಸಿದರು. ಊಟದ ವ್ಯವಸ್ಥೆಗೆ ಇರುವ ಮೇಲಂತಸ್ತಿನ ಮತ್ತು ಇತರೆ ಕಡೆಗಳಲ್ಲಿರುವ ಜಾಗೆಯನ್ನು ಇನ್ನಿತರ ಸಣ್ಣ ಪುಟ್ಟ ಸಭೆ, ಸಮಾರಂಭಗಳಿಗೆ ಉಪಯೋಗಿಸಲು ಸೂಚಿಸಿ, ಮೇಲಿಂದ ಮೇಲೆ ಆಗುವಂತ ಕೆಲಸವಲ್ಲ ಅಚ್ಚುಕಟ್ಟಾಗಿ ಮಾಡಿ ಎಂದು ತಾಕೀತು ಸಹ ಮಾಡಿದರು.  

 ಜಿಲ್ಲಾ ಸಹಾಯಕ ನಿರ್ದೇಶಕಿ ಹೇಮಾವತಿ ಸುಲಫಿ , ಮುಧೋಳ ಎ.ಇ. ವಿಜಯ ಭಜಂತ್ರಿ, ಗುತ್ತಿಗೆದಾರ ಅರುಣ ಮಠ ಇನ್ನೀತರರಿದ್ದರು. 


ಸುದ್ದಿ ಓದಿ