ಮುದ್ದೇಬಿಹಾಳದಲ್ಲಿ 3 ಕೋಟಿ ವೆಚ್ಚದ ‘ಟ್ರೀ ಪಾರ್ಕ’ ಕಾಮಗಾರಿ ಪರೀಶೀಲನೆ
ಮುದ್ದೇಬಿಹಾಳ, ಜು.08: ಪಟ್ಟಣದ ಹೊರವಲಯದಲ್ಲಿರುವ ಪ್ರಾದೇಶಿಕ ಅರಣ್ಯ ಇಲಾಖೆಯ ವತಿಯಿಂದ ಸುಮಾರು 3 ಕೋಟಿ ವೆಚ್ಚದಲ್ಲಿ ಕೆಆರಿ್ಡಎಲ್ ಮೂಲಕ ನಿರ್ಮಾಣವಾಗುತ್ತಿರುವ ಸಾಲುಮರದ ತಿಮ್ಮಕ್ಕ ಉದ್ಯಾನ (ಟ್ರೀ ಪಾರ್ಕ) ಕಾಮಗಾರಿಯನ್ನು ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಮಂಗಳವಾರ ಪರೀಶೀಲಿಸಿದರು. ಬಳಿಕ ಮಾತನಾಡಿದ ಅವರು, ಟ್ರೀ ಪಾರ್ಕ್ ನಿರ್ಮಾಣದಿಂದ ಸ್ಥಳೀಯವಾಗಿ ಹಸಿರು ಆವರಣ ಹೆಚ್ಚಾಗಲಿದ್ದು, ಜೈವಿಕ ವೈವಿಧ್ಯತೆ ವೃದ್ಧಿಯಾಗಲಿದೆ. ಪಕ್ಷಿಗಳು ಹಾಗೂ ಚಿಟ್ಟೆಗಳಿಗೆ ಉತ್ತಮ ವಾಸಸ್ಥಳ ಸಿಗುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು.
ಉದ್ಯಾನದಲ್ಲಿ ಬಟರ್ಫ್ಲೈ ಗಾರ್ಡನ್, ಕ್ಯಾಕ್ಟಸ್ ತೋಟ, ವಾಟರ್ಫ್ರಂಟ್ ಸ್ಟೆಪ್ಸ್, ಪ್ಲೇ ಏರಿಯಾ, ಪರ್ಗೋಲಾ, ಹ್ಯಾಂಗಿಂಗ್ ಬ್ರಿಡ್ಜ್ ಸೇರಿದಂತೆ ವಿವಿಧ ಆಕರ್ಷಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ವಾಕಿಂಗ್ ಪಥ, ಪ್ರಕೃತಿ ಹಾದಿಗಳು, ಕುಡಿಯುವ ನೀರು, ಮಕ್ಕಳ ಆಟದ ಪ್ರದೇಶ ಹಾಗೂ ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳನ್ನೂ ಕಲ್ಪಿಸಲಾಗುತ್ತಿದೆ.
ಇದೇ ವೇಳೆ, ಭವಿಷ್ಯದಲ್ಲಿ ಪ್ರಾಣಿ ಸಂಗ್ರಹಾಲಯ, ಪಕ್ಷಿಧಾಮ, ವಿವಿಧ ಜಾತಿಯ ಹೂ-ಹಣ್ಣುಗಳ ತೋಟ, ಓಷಧೀಯ ಸಸ್ಯಗಳ ಅಭಿವೃದ್ಧಿ ಹಾಗೂ ಕೆರೆ ನಿರ್ಮಿಸಿ ಬೋಟಿಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು. ಹೆಚ್ಚುವರಿ ಅನುದಾನದ ಅಗತ್ಯವಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಸಲ್ಲಿಸಿದ್ದು, ಶಾಸಕ ನಿಧಿಯಿಂದ ?25 ಲಕ್ಷ ನೀಡಲಾಗುವುದು. ರಾಜ್ಯ ಸರ್ಕಾರದಿಂದಲೂ ಹೆಚ್ಚಿನ ಅನುದಾನ ತಂದು ಟ್ರೀ ಪಾರ್ಕ್ ಅನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ನಾಡಗೌಡ ಭರವಸೆ ನೀಡಿದರು. ಪರೀಶೀಲನೆ ವೇಳೆ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು, ಗಣ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.