ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ ಪರಿಶೀಲನೆ
ತಾಳಿಕೋಟೆ 27: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಹಾಗೂ ಅಭಿವೃದ್ಧಿ ವಿಭಾಗದಿಂದ ಆಯೋಜಿಸಿರುವ ಜಿಲ್ಲಾ ಮಟ್ಟದ ಎಸ್ಎಸ್ಎಲ್ಸಿ ಮೊದಲ ಸರಣಿ ಪರೀಕ್ಷೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ತಾಲೂಕಾ ನೋಡಲ್ ಅಧಿಕಾರಿ, ವಿಜಯಪುರ ಡಯಟ್ನ ಹಿರಿಯ ಉಪನ್ಯಾಸಕ ಎಂ.ಎ.ಗುಳೇದಗುಡ್ಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಅಂಜುಮನ್ ಪ್ರೌಢ ಶಾಲೆ, ತಾಲ್ಲೂಕಿನ ಮೈಲೇಶ್ವರ ಗ್ರಾಮದ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬ.ಸಾಲವಾಡಗಿ, ಲಿಂಗದಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷ 9ನೆಯ ವರ್ಗ ಉತ್ತೀರ್ಣವಾದ ಮಕ್ಕಳು ಪರೀಕ್ಷೆ ಎದುರಿಸದೇ ನೇರವಾಗಿ 10ನೆಯ ವರ್ಗಕ್ಕೆ ಬಂದಿದ್ದಾರೆ. ಮಧ್ಯೆ ಕಳೆದ ಒಂದು ವರ್ಷದಿಂದ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಿಲ್ಲ. ಆದ್ದರಿಂದ ಅವರನ್ನು ಜೂನ್ ವಾರ್ಷಿಕ ಪರೀಕ್ಷೆಗೆ ಅಣಿಗೊಳಿಸಲು ಫೆಭ್ರುವರಿ, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಒಟ್ಟು ಮೂರು ಸರಣಿ ಪರೀಕ್ಷೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಹಾಗೂ ಅಭಿವೃದ್ಧಿ ವಿಭಾಗವು ಜಂಟಿಯಾಗಿ ಆಯೋಜಿಸಿದೆ. ಇದು ಮಕ್ಕಳಲ್ಲಿ ಪರೀಕ್ಷಾ ಪೂರ್ವ ತಯಾರಿಗೆ ಅನುಕೂಲವಾಗುವುದರ ಜೊತೆಗೆ ಉತ್ತಮ ಫಲಿತಾಂಶ ಪಡೆಯಲು ನೆರವಾಗುತ್ತದೆ ಎಂದರು.