ಭಾರತ- ದ.ಆಫ್ರಿಕಾ ಟಿ-20; ಪಂದ್ಯ ಸರಣಿಯ ಸಮಬಲವಾಗುತ್ತಾ?
ಕಟಕ್: ಜೂನ್ 12: ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು ಸಮಬಲಗೊಳಿಸಲು ನೋಡುತ್ತಿರುವ ಭಾರತವು ಭಾನುವಾರದ ಎರಡನೇ ಟಿ 20 ಪಂದ್ಯವನ್ನ ಗೆಲ್ಲಲು ನೋಡುತ್ತಿದೆ.
ಮೊದಲ ಪಂದ್ಯದಲ್ಲಿ, ರಿಷಬ್ ಪಂತ್ ನೇತೃತ್ವದ ತಂಡದ 212 ರನ್ ಬೆನ್ನಟ್ಟುವ ಮೂಲಕ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಮುನ್ನಡೆ ಸಾಧಿಸಿದೆ. ಡೇವಿಡ್ ಮಿಲ್ಲರ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ನಾಲ್ಕನೇ ವಿಕೆಟ್ಗೆ ಅಜೇಯ 131 ರನ್ಗಳ ಜೊತೆಯಾಟವನ್ನು ನಡೆಸಿ ಪ್ರವಾಸಿಗರನ್ನು ಗೆಲುವಿನ ದಡ ಮುಟ್ಟಿಸಿದರು. ಎರಡನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಶನಿವಾರದಂದು ತಾಲೀಮು ನಡೆಸಿತ್ತು.
ಈ ವೇಳೆ ತಮ್ಮ ನೆಚ್ಚಿನ ತಾರೆಯರ ಅಭ್ಯಾಸವನ್ನು ವೀಕ್ಷಿಸಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರಿಂದ ಕಟಕ್ನ ಬಾರಾಬತಿ ಕ್ರೀಡಾಂಗಣ ಶನಿವಾರ ಕಿಕ್ಕಿರಿದು ತುಂಬಿತ್ತು. ನಾಯಕ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಆಟಕ್ಕೆ ಪ್ರೇಕ್ಷಕರು ಜೋರಾಗಿ ಹರ್ಷೋದ್ಗಾರ ತೆಗೆದರು.
ಬಿಸಿಸಿಐನ ಅಧಿಕೃತ ಹ್ಯಾಂಡಲ್ ವೀಡಿಯೊವನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ಇವರಿಬ್ಬರ ಅದ್ಭುತ ಆಟವನ್ನ ನೋಡಬಹುದು.
2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ನಂತರ ಕಟಕ್ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಿದೆ.
ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಹೊರಗುಳಿದಿರುವ ಕಾರಣ ರಿಷಬ್ ಪಂತ್ ಈ ಸರಣಿಯಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ಪಂತ್ ಉಪನಾಯಕರನ್ನಾಗಿ ನೇಮಿಸಲಾಗಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಗಿ ಭುವನೇಶ್ವರ್ ಕುಮಾರ್, ಟೀಂ ಇಂಡಿಯಾ ಮೊದಲ ಟಿ 20 ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ ಮತ್ತು ಮುಂದಿನ ಕೆಲವು ಪಂದ್ಯಗಳಲ್ಲಿ ಸುಧಾರಿಸಲು ನೋಡುತ್ತೇವೆ ಎಂದು ಒಪ್ಪಿಕೊಂಡರು.