ಬಿಎಎಸ್ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
ಮುದ್ದೇಬಿಹಾಳ 16: ಪಟ್ಟಣದ ಹೊರವಲಯದ ಆಲಮಟ್ಟಿ ರಸ್ತೆಯ ಹಡಲಗೇರಿ ಸೀಮೆಯಲ್ಲಿ ಬರುವ ಬಿಎಎಸ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಶುಕ್ರವಾರ 79 ನೇ ಸ್ವಾತಂತ್ರ್ಯೋತ್ಸದ ಕಾರ್ಯಕ್ರಮದ ಪ್ರಯುಕ್ತ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ರಾಷ್ಟ್ರೀಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಶಿಕ್ಷಕ ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ಮಾತನಾಡಿ 79ನೇ ಸ್ವಾತಂತ್ರ್ಯೋತ್ಸವ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯವು ಅತ್ಯಂತ ಕಠಿಣ ಪರಿಶ್ರಮದಿಂದಲೇ ನಮಗೆ ಲಭಿಸಿದೆ, ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ ಸ್ವತಂತ್ರರಾಗಲು ಹೋರಾಟ ನಡೆಸಿದ ಮಹನೀಯರ ತ್ಯಾಗ ಬಲಿದಾನವನ್ನು ನಾವೆಲ್ಲರು ಇಂದು ಸ್ಮರಿಸಬೇಕು ಎಂದು ಹೇಳಿದರು.
ಪ್ರಾಚಾರ್ಯ ಸುಪರ್ಣದಾಸ್ ಮಾತನಾಡಿ ಭವ್ಯ ಭಾರತ ದೇಶವು ವಿವಿಧ ರಾಜ್ಯಗಳು ನಾನಾ ಭಾಷೆ ಕಲೆ ಸಂಸ್ಕೃತಿ, ಆಹಾರ ಪದ್ಧತಿ, ವೇಷ ಭೂಷಣಗಳಿಂದ ಕೂಡಿದ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂಬುದೇ ಹೆಮ್ಮೆಯ ವಿಷಯವಾಗಿದೆ ಪ್ರತಿಯೊಬ್ಬರು ದೇಶ ಪ್ರೇಮ, ರಾಷ್ಟ್ರೀಯತೆ ಮನೋಭಾವ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಶಿವನಗೌಡ ಬಿರಾದಾರ, ಕಾರ್ಯದರ್ಶಿ ಆದಮ್ಮ ಎಸ್. ಬಿರಾದಾರ, ಬಿಎಎಸ್ ಟ್ರಸ್ಟ್ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ, ಬಿಎಎಸ್ ಅಂತರಾಷ್ಟ್ರೀಯ ಶಾಲೆ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯವರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಕರ್ಷಕ ಪಥಸಂಚಲನ, ಧ್ವಜವಂದನೆ, ವಿವಿಧ ತರಗತಿ ಮಕ್ಕಳು ಮಹನೀಯರ ವೇಷ ಭೂಷಣ ಧರಿಸಿದ್ದು ವಿಶೇಷ ಗಮನ ಸೆಳೆಯಿತು. ನಂತರದಲ್ಲಿ ಸ್ವಾತಂತ್ರ್ಯೋತ್ಸವ ಕುರಿತು ಭಾಷಣ ಹಾಗೂ ದೇಶ ಭಕ್ತಿ ಸೇರಿ ಇತರೆ ಹಾಡುಗಳಿಗೆ ಆಕರ್ಷಕ ಸಮೂಹ ನೃತ್ಯ, ಬಳಿಕ ಸ್ಕೆಟಿಂಗ್ ಕ್ರೀಡಾಪಟುಗಳಿಂದ ವಿಶೇಷ ಕ್ರೀಡಾ ಪ್ರದರ್ಶನ ನೋಡುಗರ ಗಮನ ಸೆಳೆಯಿತು.