ಬಳ್ಳಾರಿ

ಅತಿಥಿ ಉಪನ್ಯಾಸಕರ ಸೇವಾ ಕಾಯಮಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಅತಿಥಿ ಉಪನ್ಯಾಸಕರ ಸೇವಾ ಕಾಯಮಾತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಬಳ್ಳಾರಿ 28: ಬಳ್ಳಾರಿ ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಸರಳಾದೇವಿ ಸತೀಶ್‌ಚಂದ್ರ ಅಗರ್‌ವಾಲ್ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ), ಎಸ್‌.ಎನ್‌.ಪೇಟೆ,ಯ ಮುಂದುಗಡೆ ಆನಿರ್ದಿಷ್ಟವಾಧಿ ಧರಣಿ ಹಮ್ಮಿಕೊಳ್ಳಲಾಗಿತ್ತು.  

ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಟಿ ದುರ್ಗಪ್ಪ ಮಾತನಾಡುತ್ತಾ, ಉಪನ್ಯಾಸಕರ ಸೇವಾ ಖಾಯಮಾತಿಗೆ ಆಗ್ರಹಿಸಿ ಇದೇ ತಿಂಗಳು 23ರಿಂದ ತರಗತಿ ಬಹಿಷ್ಕರಿಸಿ, ವೇತನ ರಹಿತ ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿವೆ. ಹಾಗೂ ಇವತ್ತಿಗೂ ಆರನೇ ದಿನಕ್ಕೆ  ಧರಣಿ ಮುಂದುವರೆದಿದೆ. ಇನ್ನು ಮುಂದೆಯೂ ಸಹ ನಮ್ಮ ಬೇಡಿಕೆಗಳು ಈಡೇರುವವರೆಗೂ ಇದೇ ರೀತಿಯಾಗಿ ಧರಣಿ ಮುಂದುವರಿಸುತ್ತೇವೆ ಎಂದು ತಿಳಿಸಿದರು.  

ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳು ಈಗ ಹತ್ತು-ಹದಿನೈದು ವರ್ಷಗಳಿಂದ ಅತಿಥಿ ಉಪನ್ಯಾಸಕರು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೇ, ಆತ್ಮಹತ್ಯೆ ದಾರಿ ತುಳಿದಿದ್ದಾರೆ. ಕೆಲವರು ಆರ್ಥಿಕ ಮುಗ್ಗಟ್ಟಿನಿಂದ ಖಾಯಿಲೆಗೆ ಸರಿಯಾದ ಚಿಕಿತ್ಸೆ ಸಿಗದೆ ದುರಂತಕ್ಕೆ ಸಿಕ್ಕಿ ಬಳಲಿ ಹೆಣವಾಗಿದ್ದಾರೆ. ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಅತಿಥಿ ಉಪನ್ಯಾಸಕರ ಇಡೀ ಕುಟುಂಬ ಅನಾಥ ಪರಿಸ್ಥಿತಿ ಎದುರಿಸುತ್ತಿದೆ.  

ಅತಿಥಿ ಉಪನ್ಯಾಸಕ ವೃತ್ತಿಯಲ್ಲಿ ಸಾಕಷ್ಟು ಪ್ರತಿಭಾವಂತ ಅರ್ಹರು ಮತ್ತು ಬೋಧನಾ ಕೌಶಲ್ಯವುಳ್ಳರಿದ್ದಾರೆ. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವುದು ವೈಜ್ಞಾನಿಕ ಮಾರ್ಗವಾಗಿದೆ. ನೆರೆ ರಾಜ್ಯಗಳಾದ ಆಂಧ್ರಪದೇಶ, ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿ ಸೇವಾ ಭದ್ರತೆಯನ್ನು ನೀಡಿವೆ. ಕಳೆದ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ತಾವುಗಳು ನಮ್ಮ ಪರವಾಗಿ ಧ್ವನಿ ಎತ್ತಿ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರನ್ನಾಗಿ ಮಾಡಿದ ಕೀರ್ತಿಗೆ ಪಾತ್ರರಾಗಿದ್ದೀರಿ. ಆದರೆ ಈಗ ತಮ್ಮದೇ ಸರ್ಕಾರ ಅಧಿಕಾರದಲ್ಲಿರುವುದರಿಂದ ತಾವುಗಳು ತಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿಯೂ ಅತಿಥಿಉಪನ್ಯಾಸಕರ ಖಾಯಂ ಗೊಳಿಸುವ ಬಗ್ಗೆ ಉಲ್ಲೇಖವನ್ನು ಮಾಡಿ ಭರವಸೆ ನೀಡಿರುತ್ತೀರಿ. ಸರ್ಕಾರ ಯಾವುದೇ ಸಬೂಬು ಹೇಳದೆ ಬೇರೆ ಬೇರೆ ಇಲಾಖೆಗಳಲ್ಲಿ ಮಾಡಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿಉಪನ್ಯಾಸಕರನ್ನು ಸಹ ಖಾಯಂ ಮಾಡಲೇಬೇಕು. ಬೆಳಗಾವಿಯಲ್ಲಿ ಡಿಸೆಂಬರ್ 4ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿಗೆ ಕ್ರಮಕೈಗೊಂಡು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಸಂಬಂಧ ವಿಶೇಷ ನಿಯಮಾವಳಿ ರಚನೆಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಬೇಕು. ಸರ್ಕಾರ ಈ ನಿಟ್ಟಿನಲ್ಲಿ ತ್ವರಿತವಾಗಿ ಚಿಂತಿಸಿ, ಮಾನವೀಯ ದೃಷ್ಟಿಯಿಂದ, ಖಾಯಂಗೊಳಿಸಬೇಕೆಂದರು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.  

ಡಾ. ಹನುಮೇಶ ಜಿಲ್ಲಾ ಉಪಾಧ್ಯಕ್ಷರು, ಸಿದ್ದೇಶ ಕಾರ್ಯದರ್ಶಿ, ಡಾ.ಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಫರಿದ್ ಮಹಿಳಾ ಜಿಲ್ಲಾಧ್ಯಕ್ಷರು, ಡಾ. ನಾಗಪ್ಪ, ಡಾ. ಬಸವರಾಜ್ ಟಿ, ಗುರುರಾಜ್, ಎಸ್ ಎಮ್ ರಮೇಶ್, ರುದ್ರಗೌಡ, ಸಂಧ್ಯಾ,ರಾಜಲಕ್ಷ್ಮಿ, ಇನ್ನು ಮುಂತಾದ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು. 


ಸುದ್ದಿ ಓದಿ