ನೂತನ ಬನ್ನೇಮ್ಮ ದೇವಸ್ಥಾನ ಉದ್ಘಾಟನೆ, ಪ್ರಾಣ ಮೂರ್ತಿ ಪ್ರತಿಷ್ಠಾಪನೆ
ಮಹಾಲಿಂಗಪುರ 16: ಪಟ್ಟಣದ ಬಸವನಗರದಲ್ಲಿ ಬನೆಮ್ಮದೇವಿ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಮೂರ್ತಿ ಮೆರವಣಿಗೆ ನಡೆಯಿತು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದಿಂದ ಹೊರಟ ಮೆರವಣಿಗೆ ನೀಲಕಂಠೇಶ್ವರ ದೇವಸ್ಥಾನ, ಅಷ್ಟಗಿ ಚಿತ್ರಮಂದಿರ, ಜವಳಿ ಬಜಾರ್, ನಡುಚೌಕಿ, ಡಬಲ್ ರಸ್ತೆ, ಎಪಿಎಂಸಿ ರಸ್ತೆ ಮಾರ್ಗವಾಗಿ ಬಸವನಗರದ ಬನೆಮ್ಮದೇವಿ ದೇವಸ್ಥಾನ ತಲುಪಿತು.
ಮಹಾಲಿಂಗಪುರದ ಕರಡಿ ಮಜಲು, ನಾವಲಗಿಯ ಸಂಬಾಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ 275 ಕುಂಭಗಳನ್ನು ಹೊತ್ತ ಮುತ್ತೈದೆಯರು ಮೆರವಣಿಗೆಯಲ್ಲಿ ಸಾಗಿದರು. ಮುಂದೆ ಮೆರವಣಿಗೆಯಲ್ಲಿ ಪುರವಂತರು ಶಸ್ತ್ರ ಸೇವೆ ರೋಮಾಂಚನ ಮೂಡಿಸಿತು. ಮೆರವಣಿಗೆ ನಂತರ ಮರೇಗುದ್ದಿಯ ನಿರುಪಾಧೀಶ್ವರ ಸ್ವಾಮೀಜಿಗಳಿಂದ ಅಪಾರ ಭಕ್ತ ಸಮೂಹದ ಮಧ್ಯೆ ಮೂರ್ತಿ ಪ್ರಾಣಪ್ರತಿಷ್ಠಾಪನ ಸಮಾರಂಭ ಜರುಗಿತು.
ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ, ಮಾಜಿ ಉಪಾಧ್ಯಕ್ಷ ಚನಬಸು ಹುರಕಡ್ಲಿ, ಬಸವರಾಜ ಗಿರಿಸಾಗರ, ಬಸಯ್ಯ ಚಟ್ಟಿಮಠ, ಡಾ.ಮಹಾಲಿಂಗ ಪೂಜಾರಿ, ಸುರೇಶ ಜಾಧವ, ಶಿವಲಿಂಗಪ್ಪ ಕೊಡಗಾನೂರ, ಸಂತೋಷ ಪಾನಶೆಟ್ಟಿ, ಸದಾಶಿವಯ್ಯ ಮಠ, ಸುಭಾಸ ಶಿರೋಳ, ಶಿವು ಕಡಬಲ್ಲವರ, ಆನಂದ ಬೆಳ್ಳಿಕಟ್ಟಿ ಇತರರು ಇದ್ದರು.