ವಿದ್ಯಾರ್ಥಿಗಳು ಹೆತ್ತವರ ಮತ್ತು ಜ್ಞಾನವಿತ್ತವರ ಋಣ ತೀರಿಸುವಂತೆ ಬೆಳೆಯಬೇಕು : ಡಾ.ಮಟೋಳಿ
ಕೆಎಲ್ಇ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ
ಮಹಾಲಿಂಗಪುರ 25: ವಿದ್ಯಾರ್ಥಿಗಳು ಸುಸ್ತಾದಂತಿರಬಾರದು ಮಸ್ತಾಗಿ ಉತ್ಸಾಹಿಯಾಗಿರಬೇಕು. ಹೆತ್ತವರ ಮತ್ತು ಜ್ಞಾನವಿತ್ತವರ ಋಣ ತೀರಿಸುವಂತೆ ಬೆಳೆಯಬೇಕು ಎಂದು ಬನಹಟ್ಟಿಯ ಎಸ್.ಟಿ.ಸಿ ಪದವಿ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಎಸ್.ಬಿ.ಮಟೋಳಿ ಹೇಳಿದರು.
ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪ್ರಸಕ್ತ ಸಾಲಿನ ಶೈಕ್ಷಣಿಕ, ಕ್ರೀಡೆ, ಎಸ್ಎಸ್ಎಸ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹದವಾದ ವಯಸ್ಸಿನಲ್ಲೇ ಕಲಿಕೆಯಲ್ಲಿ ಆಸಕ್ತಿ ವಹಿಸಿ ಸಾಧನೆಗೆ ಬೇಕಾದ ಅರ್ಹತೆ ಗಳಿಸಬೇಕು. ಸಮಯ ಮತ್ತು ಆಯಸ್ಸು ಕಳೆದು ಹೋಗುವ ಮುನ್ನ ಸದ್ಬಳಕೆ ಮಾಡಿಕೊಂಡು ಸಾಧಿಸಬೇಕು. ಸಂಸ್ಕಾರವಂತರಾಗಿ, ಉತ್ತಮ ನಾಗರಿಕರಾಗಿ ಸಮಾಜಕ್ಕೆ ಆಸ್ತಿಯಾಗಬೇಕು ಎಂದರು.
ಕಾಲೇಜಿನ ಒಕ್ಕೂಟದ ಅಧ್ಯಕ್ಷ, ಉಪನ್ಯಾಸಕ ಶಿವಲಿಂಗ ಸಿದ್ನಾಳ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿ ಜೀವನ ಸುವರ್ಣ ಜೀವನ ಎಂದು ಮೋಜು ಮಸ್ತಿಯಲ್ಲೇ ಕಾಲ ಕಳೆಯಬೇಡಿ ಕಲೀಕೆಯ ನಂತರದ ಜೀವನ ಸುವರ್ಣಜೀವನ ಆಗಬೇಕಾದರೆ ಈಗಿನಿಂದಲೇ ಶ್ರದ್ದೆಯಿಂದ ಪ್ರಯತ್ನ ಮಾಡಬೇಕು. ಸಮಾಜವೆಂಬ ಶೋರೂಮ್ನಲ್ಲಿ ನೀವು ಮಿಂಚಬೇಕಾದರೆ ಕಷ್ಟಗಳ ಕುಲುಮೆಯಲ್ಲಿ ಕರಗಬೇಕಾಗುತ್ತದೆ ಎಂದರು. ಕಳೆದ ಸಾಲಿನ ವಿದ್ಯಾರ್ಥಿಗಳ ಸಾಧನೆಯನ್ನು ಪರಿಚಯಿಸಿ ಪ್ರಸಕ್ತ ಸಾಲಿನ ಸಾಧನೆ ಬಗ್ಗೆ ವಾಗ್ದಾನ ಮಾಡಿದರು.
ಪ್ರಾಚಾರ್ಯ ಎಲ್.ಬಿ.ತುಪ್ಪದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಲ್ಪಿಯ ಉಳಿಗೆ ಸಿಗದ ಶಿಲೆ ಮೂರ್ತಿಯಾಗಲು ಹೇಗೆ ಸಾಧ್ಯವಿಲ್ಲವೋ ಹಾಗೇ ಶಿಕ್ಷಕನ ಪಾಠಕ್ಕೆ ನಿಲುಕದ ವಿದ್ಯಾರ್ಥಿ ಉತ್ತಮ ಫಲಿತಾಂಶ ಗಳಿಸಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ನಿಯಮಿತವಾಗಿ ತರಗತಿಗಳಿಗೆ ಹಾಜರಾಗಿ ಸಾಧನೆಯ ಸಂಕಲ್ಪ ಸಾಧ್ಯಗೊಳಿಸಬೇಕು ಎಂದರು.
ಪ್ರಸಕ್ತ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪುಷ್ಪವೃಷ್ಟಿ ಮಾಡಿ ಗುಲಾಬಿ ನೀಡಿ ಸ್ವಾಗತಿಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ 38 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ ಉದ್ಘಾಟಿಸಿದರು. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ, ಪಿಯು ಪ್ರಾಚಾರ್ಯ ಎಲ್.ಬಿ.ತುಪ್ಪದ, ಪ್ರೌಢಶಾಲೆಯ ಉಪಪ್ರಾಂಶುಪಾಲ ಬಿ.ಎನ್.ಅರಕೇರಿ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ, ಒಕ್ಕೂಟದ ಅಧ್ಯಕ್ಷ ಶಿವಲಿಂಗ ಸಿದ್ನಾಳ ವೇದಿಕೆ ಮೇಲಿದ್ದರು.
ಉಪನ್ಯಾಸಕ ಜಿ.ವೈ.ಕಿತ್ತೂರ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಅನುಪ್ರಿಯಾ ಮುಂಗರವಾಡಿ, ರವೀಂದ್ರ ಕಲ್ಲೋಳಿ ನಿರೂಪಿಸಿದರು. ಬಿ.ಎನ್.ಹಂದಿಗುಂದ ಸನ್ಮಾನಿತರ ಹೆಸರು ಘೊಷಿಸಿದರು. ಬಿ.ಬಿ.ಯಲ್ಲಟ್ಟಿ ವಂದಿಸಿದರು. ಎಂ.ಬಿ.ತೇಲ್ಕರ, ಆರ್.ಎನ್. ಪಟ್ಟಣಶೆಟ್ಟಿ, ಜಿ.ಬಿ.ಜತ್ತಿ, ಜಿ.ವೈ.ಕಿತ್ತೂರ, ಎಸ್.ಎಚ್.ಮೆಳವಂಕಿ, ಬಿ.ಎಂ.ಸಿದ್ನಾಳ, ವೈ.ಐ.ಕಾಪಶಿ, ಆನಂದ ಪಾಟೀಲ, ಬಸವರಾಜ, ಗುರು ಮೂಶಪ್ಪಗೋಳ, ಶಂಕರ ಕಲ್ಲೋಳಿ, ತಿರುಮಲೇಶ ಜಮಾದಾರ, ಸುನಿತಾ ಚೌಗಲಾ, ದೇವೆಂದ್ರ ಬಡಿಗೇರ, ಚೆನ್ನಯ್ಯ ಮಠಪತಿ ಇದ್ದರು. ಎಲ್ಲ ವಿದ್ಯಾರ್ಥಿಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಸೇರಿ ಕೇಸರಿ ಬಾತ್ ಮತ್ತು ಖಾರಾಬಾತ್ ಉಪಹಾರ ಸವಿದರು.