ಹಗರಿಬೊಮ್ಮನಹಳ್ಳಿ

ಶಾಸಕ ಭೀಮನಾಯ್ಕರಿಂದ 30ಹಾಸಿಗೆ ಆಸ್ಪತ್ರೆ ಲೋಕಾರ್ಪಣೆ

ಶಾಸಕ ಭೀಮನಾಯ್ಕರಿಂದ 30ಹಾಸಿಗೆ ಆಸ್ಪತ್ರೆ ಲೋಕಾರ್ಪಣೆ

ಮರಿಯಮ್ಮನಹಳ್ಳಿ 17:  ಪಟ್ಟಣದ 6ಹಾಸಿಗೆ ಆಸ್ಪತ್ರೆಯನ್ನು 2ಕೋಟಿ 38ಲಕ್ಷ ವೆಚ್ಚದಲ್ಲಿ 30ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ಶೀಘ್ರದಲ್ಲಿ ವೈದ್ಯರು, ಸಿಬ್ಬಂದಿಗಳನ್ನು ನೇಮಕ ಮಾಡುವ ಮೂಲಕ ಸಾರ್ವಜನಿಕ ಸೇವೆಗೆ ಸಿದ್ಧಗೊಳಿಸಲಾಗುವುದು ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್‌.ಭೀಮನಾಯ್ಕ ಹೇಳಿದರು. 

ಅವರು ಪಟ್ಟಣದಲ್ಲಿ ನೂತನ ಆಸ್ಪತ್ರೆ ಕಟ್ಟಡವನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಹಲವು ವರ್ಷಗಳಿಂದ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ 6 ಹಾಸಿಗೆ ಮಾತ್ರ ವ್ಯವಸ್ಥೆಯಿದ್ದು, ವೈದ್ಯರು, ಸಿಬ್ಬಂದಿಗಳ ಕೊರತೆ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿತ್ತು. ಮರಿಯಮ್ಮನಹಳ್ಳಿಯ ಸಾರ್ವಜನಿಕ ಆಸ್ಪತ್ರೆಯು ಸುತ್ತ 33 ಹಳ್ಳಿಗಳನ್ನು ಅವಲಂಬಿಸಿದ್ದು, ಈ ಪ್ರದೇಶ ಕೈಗಾರಿಕಾ ವಲಯ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿದೆ. ಹೀಗಾಗಿ ತುರ್ತು ಸೇವೆ ಅವಶ್ಯವಾಗಿರುವುದರಿಂದ 30 ಹಾಸಿಗೆಯ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಅವಶ್ಯವಾದ ವೈದ್ಯರು, ಸಿಬ್ಬಂದಿ, ವೈದ್ಯಕೀಯ ಸಲಕರಣೆಗಳ ಜೊತೆಗೆ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲಾಗುವುದು ಎಂದರು. 

ಮೊದಲ ಹಂತವಾಗಿ ನೂತನ ಆಸ್ಪತ್ರೆಗೆ ಅವಶ್ಯವಾದ ವೈದ್ಯ ಮತ್ತು ಸಿಬ್ಬಂದಿಗಳನ್ನು ಸರಕಾರದ ಮುಖಾಂತರ ನೇಮಕಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಒಂದುವೇಳೆ ವಿಳಂಬವಾದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಅವಗಾಹನಗೆ ತರುವ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಲ್ಲಿ ಶ್ರಮ ವಹಿಸಲಾಗವುದು ಎಂದು ತಿಳಿಸಿದರು. 

ಚೆಕ್ ಮತ್ತು ಬೈಕ್ ವಿತರಣೆ: ಶಾಸಕ ಎಸ್‌.ಭೀಮನಾಯ್ಕ ಅವರು ಇದೇ ಸಂದರ್ಭದಲ್ಲಿ ಕೋವಿಡ್ ಮೃತ ಅವಲಂಬಿತರಿಗೆ ಪರಿಹಾರದ ಚೆಕ್ ಗಳನ್ನು ವಿತರಿಸಿದರು. ನಂತರ ಪಟ್ಟಣ ಪಂಚಾಯಿತಿ ಆವರಣದಲ್ಲಿ 12 ವಿಕಲಚೇತನರಿಗೆ ತ್ರಿ ಚಕ್ರವಾಹನಗಳನ್ನು ಸಹ ವಿತರಿಸಲಾಯಿತು. ಸಮೀಪದ ಜಿ.ನಾಗಲಾಪುರ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ, ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ, ಜಿ.ಪಂ.ಮಾಜಿ ಸದಸ್ಯ ಗೋವಿಂದರ ಪರಶುರಾಮ, ಸತ್ಯನಾರಾಯಣ, ಡಣಾಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಸಿ.ಎ.ಗಾಳೆಪ್ಪ, ಮುಖಂಡರಾದ ಬುಡೇನ್ ಸಾಬ್, ವಿಜಯಕುಮಾರ, ಕೊಟ್ಗಿ ಲೋಕೇಶ, ಕಲ್ಲಳ್ಳಿ ಪರಸಪ್ಪ, ಮರಡಿರಾಮಣ್ಣ, ತಳವಾರ ಸೋಮಶೇಖ, ಹರಪನಹಳ್ಳಿ ಮಂಜುನಾಥ, ಬುಲ್ಡಿ ರಾಮಣ್ಣ,  ತಾಲೂಕು ವೈದ್ಯಾಧಿಕಾರಿ ಭಾಸ್ಕರ, ವೈದ್ಯರಾದ ಮಂಜುಳಾ, ಬಸವರಾಜ್, ದೊಡ್ಮನಿ, ಸೋಮಶೇಖರ, ವಿಜಯ ವೆಂಕಟೇಶ, ರಾಧಕೃಷ್ಣ , ಕಂದಾಯ ನೀರೀಕ್ಷಕ ಅಂದಾನ ಗೌಡ ಹಾಗೂ ಮರಿಯಮ್ಮನಹಳ್ಳಿ ಪ.ಪಂ. ನೂತನ ಸದಸ್ಯರು ಇದ್ದರು. 


ಸುದ್ದಿ ಓದಿ