ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿಗಳಿಗೆ ಪಿಂಚಣಿ ರೂಪದಲ್ಲಿ ಪ್ರೋತ್ಸಾಹಧನ ಯೋಜನೆ ಜಾರಿ : ಅಧ್ಯಕ್ಷ ರಮೇಶ ಕತ್ತಿ

ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿಗಳಿಗೆ ಪಿಂಚಣಿ ರೂಪದಲ್ಲಿ ಪ್ರೋತ್ಸಾಹಧನ ಯೋಜನೆ ಜಾರಿ : ಅಧ್ಯಕ್ಷ ರಮೇಶ ಕತ್ತಿ

ಬೆಳಗಾವಿ : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಿಬ್ಬಂದಿ ಭವಿಷ್ಯದ ಬದುಕಿನ ಅನುಕೂಲಕ್ಕಾಗಿ ನೂತನವಾಗಿ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ಪ್ರೋತ್ಸಾಹಧನ ಯೋಜನೆ ಜಾರಿಗೊಳಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಇಂದಿಲ್ಲಿ ತಿಳಿಸಿದ್ದಾರೆ.

    ಮಂಗಳವಾರ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿರುವ ಅವರು, ಇಪಿಎಫ್ ಸಂಯೋಜನೆಯಡಿ ಸಿಬ್ಬಂದಿ ಹಾಗೂ ಅವಲಂಬಿತರಿಗೆ ಸಿಗುತ್ತಿರುವ ಅತ್ಯಲ್ಪ ಮೊತ್ತದ ಪಿಂಚಣಿಯಡಿ ಜೀವನ ಸಾಗಿಸುವದು ದುಸ್ತರವಾಗಿರುವದನ್ನು ಮನಗಂಡು ಬ್ಯಾಂಕಿನ ಆಡಳಿತ ಮಂಡಳಿ ಈ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದ್ದು, ಅದರಂತೆ ಸಿಬ್ಬಂದಿಗೆ ಮಾಸಿಕ 5 ಸಾವಿರ ಹಾಗೂ ಅವಲಂಬಿತರಿಗೆ 2500 ಪಿಂಚಣಿ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

    ಈ ಹಿಂದೆ 1993ರಿಂದ 2003ರವರೆಗೆ ಬ್ಯಾಂಕಿನ ಆರ್ಥಿಕ ಸ್ಥಿತಿ ತೊಂದರೆಯಲ್ಲಿದ್ದ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಆಡಳಿತ ಮಂಡಳಿಗೆ ನೀಡಿದ ಸಹಕಾರ ಗಮನದಲ್ಲಿಟ್ಟುಕೊಂಡು ನೌಕರರ ಬೇಡಿಕೆಯಂತೆ ಆಡಳಿತ ಮಂಡಳಿಯೂ ಈವರೆಗೆ ನಿವೃತ್ತರಾದ ಹಾಗೂ ನಿಧನ ಹೊಂದಿದ ಸಿಬ್ಬಂದಿ ಅವಲಂಬಿತರ ಕುಟುಂಬಗಳಿಗೆ ಯೋಜನೆ ಜಾರಿಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.

    ಸಹಕಾರಿ ಹಾಗೂ ಖಾಸಗಿ ಅಸಂಘಟಿತ ವಲಯದ ನೌಕರರಿಗೆ ಇಪಿಎಫ್‌ನಿಂದ ಸಿಗುತ್ತಿರುವ ಪಿಂಚಣಿಯ ಜೊತೆಗೆ ಬ್ಯಾಂಕಿನ ವ್ಯವಸ್ಥೆಯಡಿ ವಿಶೇಷ ಕಾರ್ಯಯೋಜನೆ ರೂಪಿಸಲು ಆಡಳಿತ ಮಂಡಳಿ ತೀರ್ಮಾಣ ಕೈಕೊಂಡಿತ್ತು. ಅದರಂತೆ ಪ್ರಸಕ್ತ ಸಾಲಿನಿಂದಲೇ ಈ ಯೋಜನೆ ಜಾರಿಗೆ ಪ್ರತ್ಯೇಕ ನಿಧಿ ಸ್ಥಾಪಿಸಿ, ನಿವೃತ್ತ ಹಾಗೂ ನಿಧನ ಹೊಂದಿದ ಸಿಬ್ಬಂದಿ ಅವಲಂಬಿತರಿಗೆ ಈ ಯೋಜನೆ ಲಾಭ ಒದಗಿಸಲಾಗುತ್ತದೆ ಎಂದರು.

    ಈಗಾಗಲೇ ಯೋಜನೆಗೆ 371 ಸಿಬ್ಬಂದಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 366 ಜನ ಸಿಬ್ಬಂದಿಗೆ 5 ಸಾವಿರದಂತೆ ಕಳೆದ ಎಪ್ರಿಲ್ 2023ರಿಂದ ಅಕ್ಟೋಬರ 2023ರವರೆಗೆ 1.28 ಕೋಟಿ ಪಾವತಿಸಲಿದ್ದು, ಅಲ್ಲದೇ ಅವಲಂಬಿತ 136 ಕುಟುಂಬಗಳ ಪೈಕಿ 126 ಜನರಿಗೆ ತಲಾ ಎರಡುವರೆ ಸಾವಿರದಂತೆ 22.05 ಲಕ್ಷ ಪಾವತಿಸಲಿದ್ದು, ಒಟ್ಟಾರೆಯಾಗಿ 1.50 ಕೋಟಿ ರೂ.  ಬ್ಯಾಂಕಿನ ನಿವೃತ್ತ ಸಿಬ್ಬಂದಿ ಹಾಗೂ ಅವಲಂಬಿತ ಕುಟುಂಬಗಳ ಕೈಸೇರಲಿದೆ ಎಂದರು.

   ಈಗಾಗಲೇ ಸಿಬ್ಬಂದಿಗಳಿಗಾಗಿ ಐಸಿಐಸಿಐ ಪ್ರೊಡೆನ್ಸಿಯಲ್ ಇನ್ಸುರೆನ್ಸ ಸಹಯೋಗದಲ್ಲಿ ಗ್ರುಪ ಟರ್ಮ ವಿಮೆ ಯೋಜನೆಯಡಿ ಪ್ರತಿಯೊಬ್ಬ ಸಿಬ್ಬಂದಿಗೂ ಆರೋಗ್ಯ ಹಾಗೂ ಜೀವ ವಿಮೆ ಮಾಡಿಸಲಾಗಿದ್ದು, ಸಿಬ್ಬಂದಿ ಭವಿಷ್ಯಕ್ಕಾಗಿ ಆಡಳಿತ ಮಂಡಳಿ ಇನ್ನಷ್ಟು ಯೋಜನೆ ಕಾರ್ಯರೂಪಕ್ಕೆ ತರಲು ಯೋಜನೆ ರೂಪಿಸುತ್ತಲಿದೆ ಎಂದರು.

   ರೈತರಿಗೆ ಬೈಕ ಹಾಗೂ ಕಾರ್ ಸಾಲಕ್ಕೆ ವಿಶೇಷ ಯೋಜನೆ : ರಾಷ್ಟಿöçÃಕೃತ ಬ್ಯಾಂಕುಗಳಿಗೆ ಸಮನಾದ ಆರ್ಥಿಕ ಚಟುವಟಿಕೆಗಳು ಸಹಕಾರಿ ಸಂಸ್ಥೆಯಿಂದಲೂ ಜಾರಿಗೊಂಡಾಗ ಮಾತ್ರ ಸಹಕಾರ ರಂಗ ಬಲಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೋರಬ್ಯಾಂಕಿಂಗ ಜೊತೆಗೆ ಆಕರ್ಷಕ ಬಡ್ಡಿದರದಲ್ಲಿ ಸಾಲ ಹಾಗೂ ಠೇವು ಯೋಜನೆ ಜಾರಿಗೊಳಿಸಲಾಗಿದೆ.

   ಈಗಿರುವ ಕೃಷಿ ಚಟುವಟಿಕೆಗಳ ಸಾಲದ ಜೊತೆಗೆ ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರಿಗೆ ಸಿಗುತ್ತಿದ್ದ ಬೈಕ ಹಾಗೂ ಕಾರ ಖರೀದಿಸಲು ನೀಡುತ್ತಿದ್ದ ಸಾಲ ಈಗ ಗ್ರಾಮೀಣ ಭಾಗದ ರೈತರಿಗೆ ಆಕರ್ಷಕ ಬಡ್ಡಿದರದಲ್ಲಿ ನೀಡಲು ಆಡಳಿತ ಮಂಡಳಿ ವಿಶೇಷ ಯೋಜನೆ ರೂಪಿಸಿದ್ದು, ರೈತರು ಈ ಯೋಜನೆ ಸದುಪಯೋಗ ಪಡೆದು, ಕೃಷಿ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಸುದ್ದಿ ಓದಿ