ಜಾನುವಾರುಗಳ ಅಕ್ರಮ ಮಾಂಸ ಸಾಗಾಟ : ಸಂಕೇಶ್ವರ ಪೊಲೀಸರಿಂದ ವಾಹನ ವಶಕ್ಕೆ : ನೂರಾರು ಗೋವುಗಳ ಹತ್ಯೆಯ ಶಂಕೆ
ಬೆಳಗಾವಿ : ಜಾನುವಾರಗಳನ್ನು ಕತ್ತರಿಸಿ ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ವಾಹನವನ್ನು ಸಂಕೇಶ್ವರ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿಯಲ್ಲಿ ಶನಿವಾರ ರಾತ್ರಿ ನಡೆದಿದ್ದು, ಇದು ಗೋಹತ್ಯೆಯ ಮಾಂಸವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ನಿಪ್ಪಾಣಿ ಕಡೆಯಿಂದ ಬೆಳಗಾವಿ ಕಡೆಗೆ ಹೊರಟ್ಟಿದ್ದ ಮಹೇಂದ್ರ ಬೋಲೇರೊ ಪಿಕಪ್ ಗುಡ್ಸ್ ವಾಹನ ಒಂದರಲ್ಲಿ ಸುಮಾರು ಒಂದು ಟನ್ ಕಿಂತಲೂ ಹೆಚ್ಚು ಜಾನುವಾರಗಳ ಮಾಂಸ ಸಾಗಾಟ ಮಾಡಲಾಗುತ್ತಿತ್ತು.
ಈ ವೇಳೆ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಾಂಸ ತುಂಬಿದ್ದ ವಾಹನ ಕೆಟ್ಟು ನಿಂತಾಗ ವಿಷಯ ತಿಳಿದ ಸಂಕೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಂಸ ತುಂಬಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ವಾಹನದ ಚಾಲಕ ಫರಾರಿಯಾಗಿದ್ದಾನೆ ಎನ್ನಲಾಗಿದೆ.
ಬಳಿಕ ಈ ಮಾಂಸವನ್ನು ಪೊಲೀಸರು ತಪಾಸಣೆಗೆ ಒಳಪಡಿಸಲಾಗಿದ್ದು, ಬಳಿಕ ಮಾಂಸವನ್ನು ಮಣ್ಣಲ್ಲಿ ಹೂಳಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ವಾಹನದಲ್ಲಿ ಸಿಕ್ಕಿದ್ದು ಗೋವುಗಳ ಮಾಂಸ ಎಂದು ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆಯಿಂದ ತಿಳಿದು ಬರಬೇಕಿದೆ.