ಮತದಾನ ಬಹಿಷ್ಕಾರಕ್ಕೆ ಹುನ್ನೂರು ಗ್ರಾಮಸ್ಥರ ನಿರ್ಧಾರ : ನೀರಾವರಿ ಇಲಾಖೆ ವಿರುದ್ದ ಗ್ರಾಮಸ್ಥರು ಗರಂ
ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುನ್ನೂರು ಗ್ರಾಮ ತೆರವಿಗೆ ನೋಟಿಸ್ ನೀಡಿದ್ದನ್ನು ವಿರೋಧಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವ ಬಗ್ಗೆ ಹುಕ್ಕೇರಿ ತಹಶಿಲ್ದಾರರಿಗೆ ಮನವಿ ಮೂಲಕ ಎಚ್ಚರಿಕೆ ನೀಡಿದರು.
ಶುಕ್ರವಾರ ಹುಕ್ಕೇರಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ನೂರಾರು ಗ್ರಾಮಸ್ಥರು ಈ ಕುರಿತು ಹುಕ್ಕೇರಿ ತಹಸೀಲ್ದಾರರಿಗೆ ಮನವಿಯೊಂದನ್ನು ಸಲ್ಲಿಸಿ, ಕಳೆದ ಸುಮಾರು 50 ವರ್ಷಗಳಿಂದ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ನಿರ್ಮಾಣದ ವೇಳೆ ತಮ್ಮ ಆಸ್ತಿಗಳನ್ನು ಕಳೆದುಕೊಂಡಿರುವ ಹುನ್ನೂರು ಗ್ರಾಮದ ನೂರಾರು ಕುಟುಂಬಗಳ ಸದ್ಯ ಹುನ್ನೂರಿನಲ್ಲಿ ನೆಲಸಿದ್ದು, ಈ ಗ್ರಾಮಸ್ಥರಿಗೆ ನೀರಾವರಿ ಇಲಾಖೆಯಿಂದ ಮನೆಗಳನ್ನು ಖಾಲಿ ಮಾಡುವಂತೆ ನ್ಯಾಯಾಲಯದ ಮೂಲಕ ನೋಟಿಸ್‌ಗಳನ್ನು ನೀಡಲಾಗಿದೆ.
ನೀರಾವರಿ ಇಲಾಖೆಯ ಈ ನೀತಿಯನ್ನು ಖಂಡಿಸಿರುವ ಹುನ್ನೂರಿನ ಗ್ರಾಮಸ್ಥರು ಸರಕಾರ ಈ ಕೂಡಲೆ ಗ್ರಾಮಸ್ಥರ ನೆರವಿಗೆ ಬಂದು ಅನ್ಯಾಯ ಸರಿ ಪಡಿಸಬೇಕು. ಇಲ್ಲವಾದಲ್ಲಿ ತಾವು ಈ ಬಾರಿ ಮುಂದೆ ಎದುರಾಗಿರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುವದಾಗಿ ಹುಕ್ಕೇರಿ ತಹಸೀಲ್ದಾರರಿಗೆ ನೀಡಿರುವ ಮನಚಿಯಲ್ಲಿ ಒತ್ತಾಯಿಸಿದ್ದಾರೆ.