ಮನುಷ್ಯರಿಗೆ ಯಾವುದೇ ಜಾತಿ ಧರ್ಮಗಳಿಲ್ಲ: ಹಂಚಲಿ
ಮುದ್ದೇಬಿಹಾಳ: ನಾವೆಲ್ಲರೂ ಒಂದು, ಮನುಷ್ಯರಿಗೆ ಯಾವುದೇ ಜಾತಿ ಧರ್ಮಗಳಿಲ್ಲ ಎಂಬ ಜ್ಯಾತ್ಯಾತೀತ ಮತ್ತು ಸಹಬಾಳ್ವೆಯ ಸಂದೇಶವನ್ನು ಈಗ್ಗೆ ಐದು ನೂರು ವರ್ಷಗಳ ಹಿಂದೆಯೇ ನೀಡಿದ್ದ ಸಂತ ಕನಕದಾಸರ ಉದಾತ್ತ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದು ಬಿದರಕುಂದಿಯ ಆದರ್ಶ ವಿದ್ಯಾಲಯದ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.
ಅವರು ಶುಕ್ರವಾರ ತಾಲ್ಲೂಕು ಆಡಳಿತದ ಆಶ್ರಯದಲ್ಲಿ ನಡೆದ ಸಂತ ಕನಕದಾಸರ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂತ ಕನಕದಾಸರ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಜಾತಿ ಕಲಹ, ಧರ್ಮಗಳ ಮಧ್ಯೆ ವಿವಾದಗಳಿಗೆ ಯಾವುದೇ ಅರ್ಥವಿಲ್ಲ, ನಾವೆಲ್ಲರೂ ವಿಶಾಲ ಮನೋಭಾವದಿಂದ ಎಲ್ಲರೊಂದಿಗೆ ಸೇರಿ ಬದುಕಬೇಕು ಎಂದವರು.
ಸಂತ ಕನಕದಾಸರ ಕುರಿತು ತಾಲ್ಲೂಕು ಪಂಚಾಯಿತಿ ಇ.ಓ. ಎಸ್.ವೈ. ಹೊಕ್ರಾಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ತಹಶೀಲ್ದಾರ್ ಬಿ.ಎಸ್.ಕಡಕಬಾವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಆಡಳಿತದ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಪುರಸಭೆಯ ಸದಸ್ಯರಾದ ಸಂಗಮ್ಮ ದೇವರಳ್ಳಿ, ಪ್ರೀತಿ ದೆಗಿನಾಳ, ಸಹನಾ ಬಡಿಗೇರ, ಭಾರತಿ ಪಾಟೀಲ, ಮಹಿಬೂಬ ಗೊಳಸಂಗಿ, ಬಸವರಾಜ ಮುರಾಳ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮ ಬಹಿಷ್ಕರಿಸಿದ ಹಾಲುಮತ ಸಮಾಜ ಬಾಂಧವರು: ಸಂತ ಕನಕದಾಸ ಜಯಂತಿಯನ್ನು ಸಂತ ಕನಕದಾಸರ ಭಾವಚಿತ್ರದ ಮೆರವಣಿಗೆಯೊಂದಿಗೆ ಮಾಡಬೇಕು ಎಂದು ಆಗ್ರಹಿಸಿದ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಈ ರೀತಿಯ ತಾರತಮ್ಯ ಸಲ್ಲದು. ಹಾಲು ಮತ ಸಮಾಜವನ್ನು ಎಲ್ಲರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ್ದರೂ ಯಾವೊಬ್ಬ ಜನಪ್ರತಿನಿಧಿ ಪಾಲ್ಗೊಳ್ಳದೇ ಹಾಲುಮತಕ್ಕೆ ಹಾಗೂ ಕನಕದಾಸರಿಗೆ ಅವಮಾನ ಮಾಡಿದ್ದಾರೆ, ಇದಕ್ಕಾಗಿ ನಾವು ಸರ್ಕಾರದ ಈ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿದ್ದೇವೆ ಪ್ರತಿಬಾರಿ ತಾಲೂಕಿನ ಹಾಲುಮತ ಸಮಾಜವನ್ನು ಎಲ್ಲ ರಾಜಕೀಯ ನಾಯಕರು ತಮ್ಮ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ ಮಾತ್ರ ಆಗಾಗ ಅಪಮಾನಿಸುತ್ತಿಲ್ಲೆ ಇದ್ದಾರೆ ಇದಲ್ಲೇಲ್ಲವನ್ನು ಹಾಲುಮತ ಸಮಾಜ ಬಾಂಧವರು ಅರ್ಥೈಸಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಕುರುಬ ಸಮಾಜದ ಧುರೀಣರಾದ ಮಲಕೇಂದ್ರಗೌಡ ಪಾಟೀಲ, ಸಂಗಣ್ಣ ಮೇಲಿನಮನಿ, ರವಿ ಜಗಲಿ, ಸಂತೋಷ ನಾಯ್ಕೋಡಿ, ಹಣಮಂತ ಮೇಲಿನಮನಿ, ನಾಗಪ್ಪ ರೂಢಗಿ, ರಾಮಣ್ಣ ವಾಲಿಕಾರ, ಪರಶುರಾಮ ನಾಗರಬೆಟ್ಟ, ಮಲಕಪ್ಪ ದೇಸಾಯಿ ಹುಲಿಬೆಂಚಿ, ಮಂಜು ವಾಲಿಕಾರ ಮುದ್ನಾಳ ಮತ್ತಿತರರು ತಾಲ್ಲೂಕು ಆಡಳಿತ ಎಲ್ಲರ ಜಯಂತಿ ಆಚರಣೆ ಮಾಡುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಸರ್ಕಾರ ಜಯಂತಿ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ನಿಧಿ (ಮೊತ್ತ) ಯಲ್ಲಿಯೇ ಕಾರ್ಯಕ್ರಮ ಮಾಡಬೇಕು. ಹೆಚ್ಚಿನ ಅನುದಾನ ಖರ್ಚು ಮಾಡಲು ತಮಗೆ ಬರುವುದಿಲ್ಲ ಎಂದು ಕುರುಬ ಸಮಾಜದ ಧುರೀಣರೊಂದಿಗೆ ಸಂಧಾನ ಮಾತುಕತೆಗೆ ತಹಶೀಲ್ದಾರ್ ಮುಂದಾದರೂ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.