ಭರವಸೆಯೇ ಜೀವನವನ್ನು ಮುನ್ನಡೆಸುವ ಇಂಧನ...
ರಷಿಯನ್ ತತ್ವಜ್ಞಾನಿ ಹಾಗೂ ಹೋರಾಟಗಾರ ಸ್ಟಾಲಿನ್ ರವರು ಹೇಳಿರುವಂತೆ, “ಜೀವನ-ಬದುಕು ಎಂಬುದು ನಿಮಗೆ ನೇರವಾಗಿ ಯಶಸ್ಸನ್ನು ತಂದು ಕೊಡುವುದಿಲ್ಲ. ಅದು ನಮಗೆ ಸಾಧ್ಯತೆಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ನಮ್ಮಲ್ಲಿರುವ ಶಕ್ತಿ-ಸಾಮರ್ಥವನ್ನು ಸಮರ್ಥವಾಗಿ ಬಳಸಿಕೊಂಡು ಅವುಗಳನ್ನು ಯಶಸ್ಸನ್ನಾಗಿ ಬದಲಾಯಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ” ಎಂದು ಹೇಳಿದ್ದಾರೆ.
ಜೀವನವೆಂಬುದು ಒಂದು ಸಾಗರವಿದ್ದಂತೆ. ಆ ಸಾಗರವನ್ನು ಈಜುವಾಗ ಹತ್ತು ಹಲವು ತೊಂದರೆ, ಸಮಸ್ಯೆ, ಮತ್ತು ಸವಾಲುಗಳು ಎದುರಾಗಬಹುದು. ಈಸಬೇಕು ಇದ್ದು ಜಯಿಸಬೇಕು ಎನ್ನುವಂತೆ, ಹೀಗೆ ಸಾಧನೆಯ ಪಯಣದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸೆಂಬ ದಡವನ್ನು ಸೇರಲೇಬೇಕು. ಜೀವನವು ನಮಗೆ ಹಲವಾರು ಅವಕಾಶಗಳನ್ನು ನೀಡುತ್ತದೆ. ಅವಕಾಶಗಳು ದೊರೆತಾಗ ನನ್ನಲ್ಲಿ ಶಕ್ತಿ-ಸಾಮರ್ಥ್ಯವಿಲ್ಲ, ನನ್ನಿಂದ ಸಾಧ್ಯವಿಲ್ಲ, ಹೇಗೆ ಮಾಡುವುದು? ಸೋತರೆ ಹೇಗೆ? ಜನ ಏನಂದಾರು? ಎಂಬ ನಿಷೇಧಾತ್ಮಕ ಭಾವದಿಂದ ನಾವು ಮೊದಲು ಹೊರಬರಬೇಕು. ಸಿಕ್ಕ ಅವಕಾಶಗಳನ್ನು ಎಂದಿಗೂ ಕೈ ಚೆಲ್ಲಿ ಕೂಡಬಾರದು. ಕಾರಣ ಒಮ್ಮೆ ಸಿಕ್ಕ ಅವಕಾಶಗಳೆಂದಿಗೂ ಪುನಃ ಸಿಗುವುದು ಅಪರೂಪ. ಅದಕ್ಕಂತಲೇ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರು "ಸೋಲಿನಿಂದ ಕಲಿತ ಪಾಠ-ಅನುಭವವೇ ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ನೀವು ಉಸಿರಾಡುವವರೆಗೂ ಕಲಿಕೆ ಮತ್ತು ಜ್ಞಾನಾರ್ಜನೆಯೇ ನಿಮ್ಮ ಜೀವನದ ಗುರಿಯಾಗಲಿ"ಎಂದು ಹೇಳಿದ್ದಾರೆ.
ವಿಲ್ಮಾ ರುಢಾಲ್ಫ್ ಸಾಧನೆ ನಮಗೆಲ್ಲ ಆದರ್ಶಪ್ರಾಯವಾಗಲಿ: ಅಮೇರಿಕಾದ ತೆನೆಸ್ಸಿ ಎಂಬಲ್ಲಿ ಜನಿಸಿದ ವಿಲ್ಮಾ ರುಡಾಲ್ಫ್ ಅವರು ತಮ್ಮ ತಂದೆಯ 22 ಮಕ್ಕಳಲ್ಲಿ 20ನೇಯ ಮಗಳಾಗಿ ಜನಿಸಿದವಳು. ಹುಟ್ಟಂದಿನಿಂದಲೇ ಪೋಲಿಯೋ ಪೀಡಿತೆಯಾಗಿ ಜನಿಸಿದ ಅವಳಿಗೆ ವೈದ್ಯರು ಈಕೆ ಎಂದಿಗೂ ನಡೆಯಲು ಸಾಧ್ಯವಿಲ್ಲ ಮತ್ತು ಜೀವನ ಕರಾಳವಾಗಿದೆ ದುರಂತದ ಸಂದೇಶ ನೀಡಿದರು. ಒಬ್ಬ ಹುಡುಗಿ 6 ವರ್ಷದವಳಿದ್ದಾಗ ಎರಡು ಕಾಲುಗಳನ್ನು ಕಳೆದುಕೊಂಡ ವಿಲ್ಮಾ, ಏನೇ ಆಗಲಿ ಸಾಧಿಸಿಯೇ ತೀರುತ್ತೇನೆಂಬ ಛಲಗಾರಿಕೆಯಿಂದ ಕೃತಕ ಕಾಲು ಹಾಕಿಸಿಕೊಂಡು ಸತತ ಪ್ರಯತ್ನ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಗಳೆಂಬ ಯಶಸ್ಸಿನ ಮಂತ್ರ ಜಪಿಸಿದಳು. ತನ್ನ ತಾಯಿಯ ಪ್ರೇರಣೆ ಮತ್ತು ಸಹಾಯ-ಸಹಕಾರದಿಂದ ಕೃತಕ ಕಾಲುಗಳೊಂದಿಗೆ ಹತ್ತಾರು ಬಾರಿ ಓಟದ ಸ್ಫರ್ಧೆಗಳಲ್ಲಿ ಭಾಗವಹಿಸಿ, ಸತತ ಪ್ರಯತ್ನಪಟ್ಟಳು. 1956ರ ಓಲಂಪಿಕ್ನಲ್ಲಿ ಅಥೇಟಿಕ್ಸ್ನಲ್ಲಿ ಭಾಗವಹಿಸಿ ಪರಾಭವಗೊಂಡರೂ, ದೃತಿಗೆಡದೇ, ಪುನಃ 1960ರ ರೋಮ್ ಓಲಂಪಿಕ್ನಲ್ಲಿ 100, 200 ಮತ್ತು 4*100 ಮೀಟರ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿ ಮೂರು ಬಂಗಾರದ ಪದಕ ಪಡೆದು ಇಡೀ ಕ್ರೀಡಾ ಜಗತ್ತಿನಲ್ಲಿ ಹೊಸ ಇತಿಹಾಸ ಮತ್ತು ಭಾಷ್ಯ ಬರೆದಳು.
ಕಂಡ ಕನಸು ನನಸು ಮಾಡಿ ಸರ್ವಶ್ರೇಷ್ಠ ಕ್ರೀಡೆ ಓಲಂಪಿಕ್ನಲ್ಲಿ ಅಮೋಘ ಸಾಧನೆಗೈದು ಜಗತ್ತಿನಲ್ಲಿಯೇ ಹೆಸರು ಮಾಡಿದಳು. ತನ್ನಲ್ಲಿರುವ ಭರವಸೆ, ಅತ್ಮವಿಶ್ವಾಸ ಮತ್ತು ಸಾಧಿಸಿಯೇ ತೀರುತ್ತೇನೆಂಬ ಛಲದಂಕಮಲ್ಲನಂತೆ ವಿಲ್ಮಾ ರುಢಾಲ್ಫ್ ತೋರಿದ ಸಾಧನೆ ನಮಗೆಲ್ಲ ಮಾದರಿಯಾಗಲಿ. ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಲ್ಲಳೆಂಬುದಕ್ಕೆ ವಿಲ್ಮಾ ರುಢಾಲ್ಫ್ ಇದಕ್ಕೆ ಉತ್ತಮ ನಿದರ್ಶನ ಎಂದು ಹೇಳಬಹುದು.
ಆದ್ದರಿಂದ ಅದು ನನಗೆ ಸಾಧ್ಯವಿಲ್ಲ, ಕೈಲಾಗದು ಮತ್ತು ಕಠಿಣವಾಗಿದೆ ಎಂಬಂತಹ ನಕಾರಾತ್ಮಕ ಭಾವದಿಂದ ಹೊರಬಂದು ನಮ್ಮಲ್ಲಿರುವ ಶಕ್ತಿ-ಸಾಮರ್ಥ್ಯ, ಜ್ಞಾನ, ಪ್ರತಿಭೆ, ಯುಕ್ತತೆ ಮತ್ತು ಕೌಶಲ್ಯಗಳಿಂದ ಜೀವನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ ಎಂಬುದನ್ನು ಅರಿತು ಕಾರ್ಯಪ್ರವೃತ್ತರಾದರೆ ಎಲ್ಲವು ಸಾಧ್ಯ. ನಾವು ನಮ್ಮ ಜೀವನದಲ್ಲಿ ಒಳ್ಳೆಯ ಆದರ್ಶಗಳನ್ನು, ತತ್ವಗಳನ್ನು ಮತ್ತು ಉದಾತ್ತವಾದ ಗುರಿಗಳನ್ನು ಹೊಂದುತ್ತಾ ಅವುಗಳನ್ನು ಅನುಸರಿಸಿಕೊಂಡು ನಡೆದರೆ ಗೆಲುವಿನ ಹಾದಿ ಸುಗಮವಾಗಿ ಅಂತಿಮವಾಗಿ ಯಶಸ್ಸನ್ನು ಪಡೆಯಬಹುದು. ಒಂದು ವೇಳೆ ಮೈಮರೆತರೆ ಸೋಲು ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ. ಸೋಲು ಎಂದರೆ ಕೆಳಗೆ ಬೀಳುವದರಲಿಲ್ಲ, ಬಿದ್ದಂತೆ ಮೇಲೇಳುವುದರಲ್ಲಿದೆ. ಏಳು ಸಲ ಬಿದ್ದರೇನಂತೆ ಎಂಟನೇಯ ಸಲ ಫಿನಿಕ್ಸ್ ಹಕ್ಕಿಯಂತೆ ಮೇಲೇಳಲೇಬೇಕು, ಅಲ್ಲೇ ಇರುತ್ತದೆ ನಮ್ಮ ಯಶಸ್ಸು ಅನ್ನುವುದು.
ಕೊನೆಯ ನುಡಿ: ಗೌತಮಬುದ್ಧ ಅವರ ಜೀವನ ಸಂದೇಶದಂತೆ, "ಇಂದಿನ ನಮ್ಮ ಸ್ಥಿತಿಗೆ ನಿನ್ನೆ ಇದ್ದ ನಮ್ಮ ಮನೋಭಾವ ಅಥವಾ ಮನೋಧೋರಣೆಗಳೇ ಕಾರಣ. ಅದರಂತೆ ನಾಳೆ ನಾವು ಏನಾಗಬೇಕು ಅಂದುಕೊಂಡಿರುತ್ತೇವೆಯೋ ಅಥವಾ ಬಯಸುತ್ತೇವೆಯೋ ಅದು ನಮ್ಮ ಮನೋಧರ್ಮದ ಬಗ್ಗೆ ಇಂದು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಹೇಳಿದ್ದಾರೆ. ಆದ್ದರಿಂದ ನಾವು ಯಶಸ್ಸಿಗೆ ಸುಲಭದಾರಿಗಳಿಲ್ಲ ಎಂಬುದನ್ನು ಅರಿತು ಸಮಚಿತ್ತ, ತಾಳ್ಮೆ, ನಮ್ಮ ಮೇಲಿನ ದೃಢ ನಂಬಿಕೆ, ಹಿಡಿದ ಕಾರ್ಯವನ್ನು ಪೂರ್ಣಗೊಳಿಸುವವರೆಗೆ ವಿರಮಿಸದೇ ಸತತ ಪ್ರಯತ್ನ, ದಿಟ್ಟಛಲ, ಮತ್ತು ಆತ್ಮವಿಶ್ವಾಸಗಳಿಂದ ಹೋರಾಡಿದರೆ ಯಶಸ್ಸು ಲಭಿಸುತ್ತದೆ.
ಆದರೆ ನಮಗೆ ದೇವರು ಎಲ್ಲವನ್ನು ದಯಪಾಲಿಸಿದರೂ ಇದಿಲ್ಲ, ಅದಿಲ್ಲ, ಇದು ನಮ್ಮಂಥವರಿಗಲ್ಲ, ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ, ನಾವು ಕನ್ನಡ ಮಾಧ್ಯಮದಲ್ಲಿ ಓದಿದವರು ಮತ್ತು ಗ್ರಾಮೀಣ ಭಾಗದವರೆಂಬ ಸದಾ ಕುಂಟು ನೆಪವನ್ನು ಹೇಳುವದನ್ನು ಬಿಟ್ಟು ಋಣಾತ್ಮಕ ಮನೋಭಾವದಿಂದ ಹೊರಬಂದು ಪ್ರಾಮಾಣಿಕವಾಗಿ ಪ್ರಯತ್ನಶೀಲರಾದರೆ ನಮಗೂ ಆ ಅವಕಾಶಗಳು ಯಶಸ್ಸನ್ನು ತರಬಲ್ಲವು. ನಾವು ಯಾವಾಗಲೂ ಒಳ್ಳೆಯ ಆಲೋಚನೆಯನ್ನೇ ಮಾಡಬೇಕು. ನಮ್ಮ ದೃಷ್ಟಿ ಕೇವಲ ಹಿಡಿದ ಕಾರ್ಯವನ್ನು ನೆರವೇರಿಸುವತ್ತ ಕೇಂದ್ರಿಕರಿಸಬೇಕೇ ಹೊರತು ಮತ್ತೊಬ್ಬರ ಹೀಯಾಳಿಕೆ, ಟೀಕೆ ಮತ್ತು ನಮ್ಮಲ್ಲಿ ನಕಾರಾತ್ಮಕ ಭಾವ ಮೂಡಿಸುವ ಸಂಗತಿಯತ್ತಲ್ಲ.
ಅದಕ್ಕಾಗಿ ನಾವು ಪ್ರತಿಕಷ್ಟದ ಹಿಂದೆ ಒಳ್ಳೆಯದು ಇದ್ದೇ ಇರುತ್ತದೆ. ಸೋಲುಗಳ ಹಿಂದೆಯೂ ಸಹ ಗೆಲುವೆಂಬುದು ಅಡಗಿರುತ್ತದೆ. ಕಂಡ ಪ್ರತಿ ಸೋಲಿನಿಂದ ಅಥವಾ ಪ್ರಯತ್ನದಿಂದ ನಾವು ಕಲಿತ ಪಾಠ ಮತ್ತು ಪಡೆದ ಅನುಭವ ಮತ್ತು ಹೊಸತನವನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಎದುರಾಗುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆದರೆ ಈ ಪ್ರಪಂಚದಲ್ಲಿ ಯಾವ ಶಕ್ತಿಯೂ ನಮ್ಮನ್ನು ತಡೆಯಲಾರದು ಮತ್ತು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವವರು ನಾವೇ ಎಂಬುದನ್ನು ಮರೆಯಬಾರದು. ಅಂದಾಗ ಮಾತ್ರ ಆ ಸೋಲನ್ನು ಗೆಲುವನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ.
- ಮಲ್ಲಪ್ಪ ಸಿ. ಖೊದ್ನಾಪೂರ
(ತಿಕೋಟಾ)
- * * * -