ಸಂಗೀತ ಭಾರತಿ ಸಂಸ್ಥೆಯಿಂದ 415ನೇ ಮಾಸಿಕ ಚಿಂತನ ಸಂಭ್ರಮದಲ್ಲಿ ಗೌರವ
ಲೋಕದರ್ಶನ ವರದಿ
ಕಂಪ್ಲಿ 17: ತಾಲೂಕಿನ ಎಮ್ಮಿಗನೂರು ಗ್ರಾಮದ ಸರ್ಕಾರಿ ಶತಮಾನೋತ್ಸವ ಶಾಲೆಯ ಅತಿಥಿ ಶಿಕ್ಷಕ, ನಿರೂಪಕ ಹಾಗೂ ಸಂಪನ್ಮೂಲ ವ್ಯಕ್ತಿ ಎಸ್. ರಾಮಪ್ಪ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಹೊಸಪೇಟೆಯ ಪ್ರತಿಷ್ಠಿತ ಸಾಮಾಜಿಕ ಸೇವಾ ಸಂಸ್ಥೆ ಸಂಗೀತ ಭಾರತಿ ವತಿಯಿಂದ ಸಮಾಜ ಸೇವಾ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೊಸಪೇಟೆಯಲ್ಲಿ ನಡೆದ ಸಂಗೀತ ಭಾರತಿ ಸಂಸ್ಥೆಯ 415ನೇ ಮಾಸಿಕ ಚಿಂತನ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್. ರಾಮಪ್ಪ, “ಸಂಗೀತ ಭಾರತಿ ಸಂಸ್ಥೆಯ ವ್ಯವಸ್ಥಾಪಕರಾದ ಎಚ್.ಪಿ. ಕಲ್ಲಂಬಟ್ ಅವರು ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ನಮ್ಮ ಸಾಧನೆಯನ್ನು ಗುರುತಿಸಿ ನೀಡಿರುವ ಈ ಗೌರವವು ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೇರಣೆ ನೀಡಿದೆ,” ಎಂದು ಹೇಳಿದರು. ಸಂಗೀತ ಭಾರತಿ ಸಂಸ್ಥೆಯ ವ್ಯವಸ್ಥಾಪಕ ಎಚ್.ಪಿ. ಕಲ್ಲಂಬಟ್ ಮಾತನಾಡಿ, ಸಾಧಕರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೈತಪರ ಹೋರಾಟಗಾರ ಬಸವರಾಜ್, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.