ಹಿರೇಕೋಡಿ ಜೈನ್ ಮುನಿ ಹತ್ಯೆ ಪ್ರಕರಣ : ಖುದ್ದು ತನಿಖೆಗೀಳಿದ ಸಿಐಡಿ ಡಿಜಿಪಿ, ಐಜಿ, ತನಿಖೆ ಚುರುಕು
ಬೆಳಗಾವಿ : ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಪ್ರಕರಣದ ತನಿಖೆಗಾಗಿ ಖುದ್ದು ಸಿಐಡಿ ಡಿಜಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಫೀಲ್ಡ್‌ಗಿಳಿದ್ದಾರೆ.

ಈ ಹತ್ಯೆಯ ಜಾಡು ಹಿಡಿದಿರುವ ಸಿಐಡಿ ಅಧಿಕಾರಿಗಳು ಶನಿವಾರ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಸಿಐಡಿ ಡಿಜಿಪಿ ಡಾ. ಎಂ.ಎ.ಸಲೀಂ, ಸಿಐಡಿ ಐಜಿ ಪ್ರವೀಣ ಪವಾರ್, ಸಿಐಡಿ ಎಸ್‌ಪಿ ವೆಂಕಟೇಶಕುಮಾರ್ ಇವರುಗಳು ಭೇಟಿ ನೀಡಿದ್ದು, ಸಿಐಡಿ ಅಧಿಕಾರಿಗಳಿಗೆ ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸಕುಮಾರ್, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ ಚಿಕ್ಕೊಡಿ ಡಿಎಸ್ ಪಿ ಸೇರಿ ಹಲವು ಪೊಲೀಸ ಅಧಿಕಾರಿಗಳು ಸಾಥ್ ನೀಡಿದರು.
ಐದು ದಿನಗಳ ವರೆಗೆ ಚಿಕ್ಕೋಡಿಯಲ್ಲೇ ಬೀಡುಬಿಟ್ಟು ತನಿಖೆ ನಡೆಸಿದ್ದ ಸಿಐಡಿ ಐಜಿ ಪ್ರವೀಣ ಪವಾರ್ ತನಿಖೆ ನಡೆಸುತ್ತಿದ್ದರು. ಆದರೆ ಶನಿವಾರ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮಕ್ಕೆ ಭೇಟಿ ನೀಡಿರುವ ಸಿಐಡಿ ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಳಿಸಿರುವ ಬಗ್ಗೆ ತಿಳಿದು ಬಂದಿದೆ.
ಜುಲೈ 5ರಂದು ಹಿರೇಕೂಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ನಡೆದಿತ್ತು. ಜುಲೈ 7ರಂದು ಚಿಕ್ಕೋಡಿ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ನಾಪತ್ತೆ ಕೇಸ್ ದಾಖಲಾದ ನಾಲ್ಕು ಗಂಟೆಯಲ್ಲೇ ಇಬ್ಬರು ಆರೋಪಿಗಳ ಬಂಧಿಸುವಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದರು.
ಜೈನ್ ಮುನಿ ಹತ್ಯೆ ಪ್ರಕರಣದಲ್ಲಿ ಆರೋಪಿತರಾದ ನಾರಾಯಣ ಮಾಳಿ ಹಾಗೂ ಆರೋಪಿ ಹಸನಸಾಬ್ ದಲಾಯತ್ ಇಬ್ಬರನ್ನು ಬಂಧಿಸಲಾಗಿತ್ತು. ಈಗ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಈ ಇಬ್ಬರು ಹಂತಕರನ್ನು ಇಡಲಾಗಿದೆ. ಈ ಇಬ್ಬರನ್ನ ಬಂಧಿಸಿ ಟೆಕ್ನಿಕಲ್ ಎವಿಡೆನ್ಸ್ ಸಮೇತ ಹಲವು ಸಾಕ್ಷ್ಯಗಳ ಸಂಗ್ರಹ ಮಾಡಲಾಗಿತ್ತು.
ಜೈನಮುನಿಗಳ ಪರ್ಸನಲ್ ಡೈರಿ ಸಹ ಜಪ್ತಿ ಮಾಡಿದ್ದ ಪೊಲೀಸರು, ಜೈನಮುನಿಗಳ ಪರ್ಸನಲ್ ಡೈರಿಯಲ್ಲಿ ಹಣ ನೀಡಿದ ಬಗ್ಗೆ ಹೆಸರು ಉಲ್ಲೇಖಿಸಿದ 20ಕ್ಕೂ ಹೆಚ್ಚು ಜನರ ವಿಚಾರಣೆ ಸಿಐಡಿ ತಂಡವು ನಡೆಸಿದೆ.

ಹಿರೇಕೋಡಿ ನಂದಿಪರ್ವತ ಆಶ್ರಮದಲ್ಲೇ ಜೈನಮುನಿಗಳ ಹತ್ಯೆಗೈದಿದ್ದ ಹಂತಕರು, ಜೈನಮುನಿಗಳ ಹತ್ಯೆ ಮಾಡಿ ಮೃತದೇಹವನ್ನು ಮಾವಿನಹೊಂಡ ಬಳಿಯ ಗುಡ್ಡಕ್ಕೆ ಒಯ್ದು ಪೀಸ್ ಪೀಸ್ ಮಾಡಿದ್ದ ಹಂತಕರು, ಬಳಿಕ ಖಟಕಬಾವಿಯ ಕಬ್ಬಿನ ಗದ್ದೆಯಲ್ಲಿನ ತೆರೆದ ಕೊಳವೆಬಾವಿಗೆ ಎಸೆದಿದ್ದರು.
ಜುಲೈ 8ರಂದು ಕೊಳವೆಬಾವಿಯಿಂದ ಜೈನಮುನಿಗಳ ಮೃತದೇಹವನ್ನು ಪೊಲೀಸರು ಹೊರತಗೆದಿದ್ದರು. ಈ ಹತ್ಯೆಯ ಪ್ರಕರಣ ತನಿಖೆ ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ರಾಜ್ಯ ಸರ್ಕಾರ ವಹಿಸಿತ್ತು. ಜುಲೈ 23ರಿಂದ ಚಿಕ್ಕೋಡಿಯಲ್ಲೇ ಬೀಡು ಬಿಟ್ಟು ತನಿಖೆ ಸಿಐಡಿ ತಂಡ ನಡೆಸಿತ್ತು.