ಮತ್ತೆ ಜೊಲ್ಲೆ ಮನೆ ಕದ ತಟ್ಟಿದ ಹಿರಾಶುಗರ ನಿರ್ದೇಶಕರು : ಎಬಿ. ಕತ್ತಿಗೆ ಹಿನ್ನಡೆ
ಸಂಕೇಶ್ವರ : ಕಳೆದ ಕೆಲವು ತಿಂಗಳುಗಳಿಂದ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆಯುತ್ತಿರುವ ನಾಟಕೀಯ ಬೆಳವಣಿಗೆಗಳು ಮುಂದೆವರೆದಿದ್ದು, ಇಂದು ನಡೆದ ಬೆಳವಣಿಗೆಯಲ್ಲಿ ಎ.ಬಿ.ಪಾಟೀಲ ಹಾಗೂ ಕತ್ತಿ ಕುಟುಂಬದ ಸಂಪರ್ಕ ಬಿಟ್ಟ ಕಾರಖಾನೆ ನಿರ್ದೇಶಕರು ಮತ್ತೆ ಅಣ್ಣಾಸಾಹೇಬ ಜೊಲ್ಲೆ ಅವರ ಮನೆ ಕದ ತಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಸದಾ ಸುದ್ದಿಯಲ್ಲಿ ಇರುವ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯ ನಿರ್ದೇಕರು ಕಳೆದ 30 ವರ್ಷಗಳಿಂದ ಕತ್ತಿ ಕುಟುಂಬದ ಹಿಡಿತದಲ್ಲಿದ್ದ ಸಕ್ಕರೆ ಕಾರ್ಖಾನೆಯನ್ನು ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ತೆಕ್ಕೆಗೆ ನೀಡಿದ್ದರು.
ಬಳಿಕ ಮತ್ತೆ ಬಾಲಚಂದ್ರ ಜಾರಕಿಹೊಳಿ ಹಾಗೂ ಜೊಲ್ಲೆ ಅವರನ್ನು ಬಿಟ್ಟು ಮಾಜಿ ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಅವರ ಬಳಿ ಹೋಗಿ ಹಿರಣ್ಯಕೇಶಿ ಕಾರಖಾನೆಯನ್ನು ನೀವೆ ಮುನ್ನಡಿಸಿ ಎಂದು ವಿನಂತಿಸಿಕೊಂಡಿದ್ದರು. ಇದಕ್ಕೆ ಕೋರೆ ಅವರು ಸರಿಯಾಗಿ ಪ್ರತ್ಯುತ್ತರ ನೀಡದ ಹಿನ್ನೆಲೆಯಲ್ಲಿ ಮತ್ತೆ ವಾಪಸಾಗಿದ್ದರು.
ಅದರ ಬಳಿಕ ಮೊನ್ನೆ ಸಂಕೇಶ್ವರದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಎಬಿ.ಪಾಟೀಲ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಅವರಿಬ್ಬರು ಒಂದಾಗಿ ರಾಜಕೀಯ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಹಿರಣ್ಯಕೇಶಿ ಕಾರಖಾನೆಯನ್ನು ಕತ್ತಿ ಕುಟುಂಬಕ್ಕೆ ಹಾಗೂ ಎಬಿ ಪಾಟೀಲ ಅವರ ಜೊತೆ ಸೇರಿ ಮುನ್ನಡೆಸುವ ತೀರ್ಮಾನ ಮಾಡಿದ್ದರು.
ಆದರೆ ಹಿರಣ್ಯಕೇಶಿ ಸಕ್ಕರೆ ಕಾರಖಾನೆಯನ್ನು ಮುನ್ನಡೆಸುವಲ್ಲಿ ಎ.ಬಿ.ಪಾಟೀಲ ಹಾಗೂ ಕತ್ತಿ ಅವರು ಹಿನ್ನಡೆ ಉಂಟಾಗಿದ್ದು, ಸಂಘ ಸಂಸ್ಥೆಗಳಿಂದ ದುಡ್ಡು ಸಂಗ್ರಹ ಮಾಡುವಲ್ಲಿ ಹಿನ್ನಡೆ ಅನುಭವಿಸಿರುವ ಕಾರಣ ತಾವು ಮತ್ತೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ಜೊತೆಗೆ ಹೋಗಿರುವದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಈ ಬಗ್ಗೆ ರವಿವಾರ ಮಧ್ಯಾಹ್ನ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಭಿವಂಶಿ ಗ್ರಾಮದಲ್ಲಿ ಭೇಟಿ ಮಾಡಿದ ಹಿರಾಶುಗರ ನಿರ್ದೇಶಕರು ಚರ್ಚೆ ನಡೆಸಿ ಬಾಲಚಂದ್ರ ಜಾರಕಿಹೊಳಿ ಹಾಗೂ ಜೊಲ್ಲೆ ಅವರ ಮುಂದಾಳತ್ವದಲ್ಲಿ ಕಾರಖಾನೆ ಮುನ್ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.