ರಾಣೆಬೆನ್ನೂರಲ್ಲಿ ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ತ ಽ ನಗರಸಭೆ ಆಡಳಿತಕ್ಕೆ ಜನಾಕ್ರೋಶ
ರಾಣೆಬೆನ್ನೂರು 08: ಹವಾಮಾನ ಇಲಾಖೆ ನೀಡಿದ ಮಾಹಿತಿ ಮುನ್ಸೂಚನೆಯಂತೆ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ರಾಣೆಬೆನ್ನೂರು ನಗರವು ಸೇರಿದಂತೆ ಹಾವೇರಿ ಜಿಲ್ಲೆ ಯಾದ್ಯಂತ ಭಾರಿ ಮಳೆ ನೆಲಕ್ಕಪಳ್ಳಿಸಿದ್ದು, ಇದರ ಪರಿಣಾಮ ವಿವಿಧಡೆಗಳಲ್ಲಿ ಅನೇಕ ಅವಘಡಗಳು ಸಂಭವಿಸಿ ಜನಜೀವನ ಅಸ್ತವ್ಯತೆಗೆ ಕಾರಣವಾದಂತಾಗಿದೆ. ಬಿರುಗಾಳಿ ಗುಡುಗು, ಸಿಡಿಲು ಸಹಿತ ಬೀಸಿದ ಭಾರಿ ಬಿರುಗಾಳಿ ಮಳೆಗೆ ರಾಣೆಬೆನ್ನೂರು ನಗರದಲ್ಲಿ ಎಲ್ಲೆಂದರಲ್ಲಿ ನದಿ ಹಳ್ಳ ಕೊಳ್ಳಗಳ ಮಾದರಿಯಲ್ಲಿ ನೀರು ಹರಿಯುತ್ತಿರುವುದು ಕಂಡುಬಂದಿತು. ರಸ್ತೆ ಕಾಣದೆ, ವಾಹನಗಳು ಚಲಾಯಿಸದೆ,
ನಿಂತಲ್ಲೇ ನಿಲ್ಲುವಂತಾಗಿದ್ದವು. ಈ ಕುರಿತು ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಮಳೆ ಬಂದರೆ ರಾಣೆಬೆನ್ನೂರಿನಲ್ಲಿ ಆಗಬಹುದಾದ ಸಂಕಷ್ಟ ಪರಿಣಾಮ ಮತ್ತು ನಷ್ಟ ಕುರಿತು ಅನೇಕ ಬಾರಿ ಮಾಧ್ಯಮವು ಸುದ್ದಿಯ ಮೂಲಕ,ಗಮನಕ್ಕೆ ತಂದರು ಯಾವುದೇ ಪ್ರಯೋಜನ ಕಂಡಿಲ್ಲ ಇದಕ್ಕೆಲ್ಲ ಎಲ್ಲವೂ ಸ್ಥಳೀಯ ನಗರ ಸಭೆ ಆಡಳಿತದ ವೈಫಲ್ಯವೇ ಕಾರಣ ಎನ್ನುವುದು ಮತ್ತೆ ನಿನ್ನೇ ಸುರಿದ ನಾಗರಿಕರು ಅನುಭವಿಸಿದ ಮಳೆ ಸಂಕಷ್ಟವೇ ಸಾಕ್ಷಿಯಾಗಿದೆ.
ಈ ಕುರಿತು ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದಕ್ಕೆಲ್ಲ ಕಾರಣ ನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ರಾಜಕಾಲುವೆ ಅವೈಜ್ಞಾನಿಕ ನಿರ್ಮಾಣವೇ ಕಾರಣ ಎಂದು ಆರೋಪಿಸಿದ್ದಾರೆ. ಮಳೆಗಾಲ ಆರಂಭವಾಗಿದೆ ಮಳೆ ಬಿದ್ದಾಗೊಮ್ಮೆ ಮೇಲಿಂದ ಹರಿದು ಬರುವ ನೀರು ಸರಾಗವಾಗಿ ಸಾಗದೆ ಕಿರುಗಾಲುವೆಯಲ್ಲಿ ಸರಾಗವಾಗಿ ನೀರು ಹರಿಯದೆ, ನೀರು ತುಂಬಿ ತುಳುಕಿ ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗುವುದೇ ಸಾಕ್ಷಿಯಾಗಿದೆ ಎನ್ನುತ್ತಾರೆ
ನಾಗರಿಕರು. ಜನತಾ ಬಜಾರ್ ಬಳಿಯ ವ್ಯಾಪಾರಸ್ಥರು ಅನೇಕ ಬಾರಿ ಪೌರಾಯುಕ್ತರಿಗೆ ಮೌಖಿಕ ಮತ್ತು ನೇರವಾಗಿ ಈ ಭಾಗದಲ್ಲಿ ವರ್ತಕರು ಅನುಭವಿಸುವ ಸಮಸ್ಯೆಗಳ ಕುರಿತು ಪರಿಹಾರಕ್ಕಾಗಿ ಮನವಿ ಸಲ್ಲಿಸಿದರು ಕ್ಯಾರೆ ಎನ್ನದ ನಗರಸಭೆ ಆಡಳಿತವು ಈ ಕೂಡಲೇ ವೈಜ್ಞಾನಿಕವಾಗಿ ರಾಜಕಾಲುವೆ ಮತ್ತು ಕಿರುಗಾಲುವೆ ನಿರ್ಮಿಸಲು ಮುಂದಾಗಬೇಕು ಎಂದು ಓಕ್ಕೂರಲ ಆಗ್ರಹಿಸಿದ್ದಾರೆ. ಶನಿವಾರ ಸಂಜೆ ಬಿದ್ದ ಮಳೆಗೆ, ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಏಕಾಏಕಿ ಅಧಿಕ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮ ಅನೇಕ ದಾಖಲೆ ಪುಸ್ತಕಗಳು ನೀರಿಗೆ ಮುಖ ಮಾಡಿವೆ ಎಂದು ಹೇಳಲಾಗುತ್ತಿದೆ.
ದುರ್ಗಾ ಹೂವಿನ ಮತ್ತು ತರಕಾರಿ ಮಾರುಕಟ್ಟೆ,ನೆಹರು ಮಾರ್ಕೆಟ್, ಹಲಗೇರಿ ರಸ್ತೆ, ಈರುಳ್ಳಿ ಮಾರುಕಟ್ಟೆ, ಎಂಜಿ ರಸ್ತೆ ಹವಾಲ್ದಾರ್ ಹೊಂಡ, ದುರ್ಗಾ ವೃತ್ತ, ಮೇಡ್ಲೆರಿ ರಸ್ತೆ, ಗಂಗಾಜಲ ಚೌಡೇಶ್ವರಿ ದೇವಸ್ಥಾನ, ಹುಣಸಿಕಟ್ಟಿ ರಸ್ತೆ, ವಿಕಾಸ ನಗರ, ವಿನಾಯಕ ನಗರ, ಮೃತ್ಯುಂಜಯ ನಗರ ಬೀರೇಶ್ವರ ನಗರ ಸೇರಿದಂತೆ ವಿವಿಧ ಬಡಾವಣೆಗಳು ಮೊದಲಾದೆಡೆಗಳಲ್ಲಿ ನೀರು ಹರಿದು ಜನ ಜೀವನ ಅಸ್ವಸ್ಥಗೊಂಡು ಮತ್ತು ಜನ ವಾಹನ,ಸಂಚಾರ ನಿಸ್ತ್ರೀಯಗೊಂಡು, ಯಾವುದೇ ವಾಹನ ಚಲಿಸಿದಂತಾಗಿದ್ದವು.