ರೈತರು, ಜನಸಾಮಾನ್ಯರಿಂದ ಹರಿವಾಣ ಕಟ್ಟೆ ಲೂಟಿ ಧಾರ್ಮಿಕ ಕಾರ್ಯಕ್ರಮ
ಗುರು ಮಹಾಲಿಂಗೇಶ್ವರ ಜಾತ್ರೆ ನಿಮಿತ್ತ ಅಲಂಕೃತ ತೇರು ಎಳೆಯುವ ಕಾರ್ಯಕ್ಕೆ ಮಠದ ಸ್ವಾಮೀಜಿಗಳಿಂದ ಚಾಲನೆ
ಹಣಮಂತ ನಾವಿ
ಮಹಾಲಿಂಗಪುರ 19: ಮಠದಿಂದ ಗುರು ಮಹಾಲಿಂಗೇಶ್ವರರ ಮೂರ್ತಿ ಹೊತ್ತು ನಡುಚೌಕಿ ಮತ್ತು ಗಡಾದ ಓಣಿಯ ಕಲ್ಯಾಣ ಕಟ್ಟೆ ಮಾರ್ಗವಾಗಿ ಸಾಗುವ ಅಲಂಕೃತ ತೇರಿಗೆ ಮಠದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ಬುಧವಾರ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಮಂಗಳಾರತಿ ಮಾಡುವ ಮೂಲಕ ತೇರು ಎಳೆಯುವ ಕಾರ್ಯಕ್ಕೆ ಚಾಲನೆ ನೀಡಿದರು.
ಗಂಗಾ ಯಮುನಾ ಸಂಗಮ ಮಧ್ಯೆ ಕ್ಷೇತ್ರದೊಳಗೆ ಬಂಗಾರದಂತೆ ಶೋಭಿಸುತ್ತಿರುವ ಶಿವರಂಗ ಮಂಟಪದೊಳಗೆ ರಂಗು ರಂಗಾಗಿ ಕುಳಿತಿರುವ ತ್ರಾಯ ಮಹಾ ಮನ ಮುರುಘೇಂದ್ರ ಮಹಾಲಿಂಗ ಪಾಶ್ಚಾ ಯೋಗಿ ನಮಃ ಬಹು ಪರಾಕ ಎಂಬ ವೇದ ಘೋಷಗಳನ್ನು ಎತ್ತರದ ಧ್ವನಿಯಲ್ಲಿ ಕೂಗುತ್ತಾ ಸದ್ಭಕ್ತರು ರಥವನ್ನು ಶೃದ್ಧೆ, ಭಕ್ತಿಯಿಂದ ಎಳೆದರು.
ರಥದ ಮುಂದೆ ಮುಂದೆ ಹಲಿಗಿ ವಾದನ, ಕರಡಿ ಮೇಳ, ಸಂಬಾಳ, ಶಹನಾಯಿ ಮತ್ತು ಇತರ ಮಂಗಳ ವಾದ್ಯಗಳೊಂದಿಗೆ ನಂದಿಕೋಲು, ಕಂಡ್ಯಾಳ ಬಾಸಿಂಗ ಮತ್ತು ಉಚ್ರಾಯ್ ಗಳು ತುಂಬಿದ ರಥಕ್ಕೆ ಸ್ವಾಗತ ಕೋರುವ ರೀತಿ ಸಾಗಿ ಬಂದವು. ಈ ಸಂದರ್ಭದಲ್ಲಿ ದೂರದೂರುಗಳಿಂದ, ಹಳ್ಳಿಗಳಿಂದ ಮತ್ತು ಸ್ಥಳೀಯರೊಳಗೊಂಡ ಲಕ್ಷಾಂತರ ಭಕ್ತರು ತೇರು ಎಳೆಯುವ ಪೃಕ್ರಿಯೆಯಲ್ಲಿ ಭಾಗವಹಿಸಿ ಸೊಬಗನ್ನು ಆನಂದಿಸಿದರು. ಬಣ್ಣ ಬಣ್ಣದ ಲೈಟ್ ಗಳು, ಸುಗಂಧ ಪುಷ್ಪಗಳಿಂದ ಆವೃತ್ತವಾಗಿ ತೇರು ನೋಡುಗರ ಕಣ್ಮನ ಸೆಳೆಯಿತು.
ತೇರು ಚನ್ನಗಿರಿ ದೇವಸ್ಥಾನಕ್ಕೆ ಸಾಗಲು ಸುಮಾರು 12 ಗಂಟೆಗಳ ಕಾಲಾವಕಾಶಬೇಕು. ಕರಡಿ ಮನೆತನದ ಮೂರು ಕರಡಿ ಮದಾಲಸಿ ಮುಗಿಯುವುದರೊಳಗೆ ಬೆಳಕೆ ಹರಿಯುವುದು. ಈ ಮಧ್ಯೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ತುಂಬಿದ ತೇರಿನ ದರ್ಶನ ಪಡೆದು, ಹೂವಿನ ಹಾರ, ಉತ್ತುತಿ, ಬೆಂಡು, ಬತ್ತಾಸನ್ನು ತೇರಿನಲ್ಲಿ ವಿರಾಜಮಾನ ಗುರು ಮಹಾಲಿಂಗೇಶ್ವರರಿಗೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳ ಪೂರೈಕೆಗೆ ಪ್ರಾರ್ಥಿಸುತ್ತಾರೆ.
ತುಂಬಿದ ತೇರು ಎಳೆಯುವ ಮುಂಚಿತವಾಗಿ ಬುಧವಾರ ಸಂಜೆ ಹೊತ್ತಿಗೆ ಮಹಾಲಿಂಗೇಶ್ವರ ಮಠದಲ್ಲಿ ರೈತರು ಬೆಳೆದ ಫಸಲು ಬಾಳೆಗೊನೆ, ಕಬ್ಬು, ಜೋಳ, ಗೋವಿನಜೋಳ ಇನ್ನಿತರ ದವಸ ಧಾನ್ಯಗಳನ್ನು ಕೂಡಿ ಹಾಕಿ ಅವುಗಳಿಗೆ ಪೂಜೆ ನಡೆಯುತ್ತದೆ. ಇದಕ್ಕೆ ವಾಡಿಕೆಯಲ್ಲಿ ' ಹರಿವಾಣ ' ಕಟ್ಟೆ ಲೂಟಿ ಎನ್ನುತ್ತಾರೆ.
ರೈತರು ಸ್ಪರ್ಧೆಗೆ ಇಳಿದಂತೆ ತಾ ಮುಂದು, ನಾ ಮುಂದು ಎನ್ನುವಂತೆ ಕೂಡಿ ಹಾಕಿದ ಕೃಷಿ ಫಸಲುಗಳನ್ನು ಕೈಗೆ ಸಿಕ್ಕಷ್ಟು ಪಡೆದು ತಮ್ಮ ಹೊಲ, ಗದ್ದೆ ಮತ್ತು ಮನೆಗಳಿಗೆ ತೆಗೆದುಕ್ಕೊಂಡು ಹೋಗುತ್ತಾರೆ. ಇವುಗಳಿಂದ ಮನ, ಮನೆಗಳಲ್ಲಿ ನೆಮ್ಮದಿ, ಕೃಷಿ ಫಸಲಿನಲ್ಲಿ ಹೆಚ್ಚಳ ಮತ್ತು ಅನ್ನದ ಖನಜ ಕಡಿಮೆಯಾಗುವುದಿಲ್ಲವೆಂಬ ಬಲವಾದ ನಂಬಿಕೆ ಭಕ್ತರಲ್ಲಿ ಬೇರೂರಿದೆ. ತದ ನಂತರವೇ ರಥ ಎಳೆಯುವ ಕಾರ್ಯಕ್ಕೆ ಶ್ರೀಗಳಿಂದ ಚಾಲನೆ ದೊರೆಯುತ್ತದೆ.