ವಿಜಯನಗರ ಜಿಲ್ಲಾ ಕಲಾವಿದರ ಒಕ್ಕೂಟಕ್ಕೆ ಹಂಚಿನಮನಿ ಆಯ್ಕೆ
ಹಗರಿಬೊಮ್ಮನಹಳ್ಳಿ 04 : ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಯ 6 ತಾಲೂಕಿನ ಸರ್ವ ಕಲಾವಿದರು ಸರ್ವಾನುಮತದಿಂದ ಜಿಲ್ಲೆಯ ಕಲಾವಿದರ ಒಕ್ಕೂಟಕ್ಕೆ ಪಟ್ಟಣದ ಹಂಚಿನಮನಿ ರಮೇಶ್ರವರನ್ನು ಆಯ್ಕೆ ಮಾಡಲಾಯಿತು.
ನಗರದ ಹಗರಿ ಆಂಜನೇಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಕಲಾವಿದರ ಒಕ್ಕೂಟದ ನೂತನ ಅಧ್ಯಕ್ಷ ಹಂಚಿನಮನಿ ರಮೇಶ್ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯಸರ್ಕಾರ ಮೈಸೂರು ದಸರಾ ಆಚರಣೆಗೆ 6 ಕೋಟಿ ಅನುದಾನವನ್ನು ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಅದೇ ರೀತಿ ಮುಂದಿನ ದಿನಗಳಲ್ಲಿ ನಮ್ಮ ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಐತಿಹಾಸಿಕ ಹಂಪಿ ಉತ್ಸವಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿ ಈ ಭಾಗದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು.
ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ್ ಸೊನಾರೆಯವರು ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಗೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಿಸಿರುವುದು ಸಂತಸತಂದಿದೆ. ಅವರ ಆಶಯದಂತೆ ಜಿಲ್ಲೆಯಾಧ್ಯಂತ ಇರುವ ಕಲಾವಿದರಿಗೆ ಶೀಘ್ರದಲ್ಲೇ ಗುರುತಿನ ಚೀಟಿಯನ್ನು ಮಾಡಿಸಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಅದರ ಜೊತೆಗೆ ಜಾನಪದದ ವಿವಿಧ ಪ್ರಕಾರಗಳಾದ ಬಯಲಾಟ, ಸೋಬಾನೆ, ಗೀಗಿಪದ ಹೀಗೆ ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಗುರುತಿಸುವ ನಿಟ್ಟಿನತ್ತ ಯೋಜನೆಯನ್ನು ರೂಪಿಸಲಾಗುವುದು. ಬಡ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.
ತಬಲಾ ವಿರುಪಾಕ್ಷಪ್ಪ , ಬೆಳ್ಳಕ್ಕಿ ರಾಮಣ್ಣ, ಅಹಿಂದಾ ಸಂಚಾಲಕ ಬುಡ್ಡಿ ಬಸವರಾಜ , ಮುಟುಗನಹಳ್ಳಿ ಕೊಟ್ರೇಶ್, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕುಟದ ಗೌರವ ಅಧ್ಯಕ್ಷ ಟಿ.ರಾಜಾರಾವ್ ಮಾತನಾಡಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ತಾಲೂಕು ಅಧ್ಯಕ್ಷ ವಕೀಲ ಹಾಗೂ ಕಲಾವಿದ ಉಮಾಶಂಕರ, ಕಲಾವಿದರಾದ ಕೆ.ಇ.ಬಿ. ಶಿವಮೂರ್ತಿ, ಉಲವತ್ತಿ ಭೀಮಪ್ಪ ಕಲಬಾಳು, ಪರಶುರಾಮ್, ಚಿಂತ್ರಪಳ್ಳಿ ಸುರೇಶ್, ಸಣ್ಣ ಹುಲುಗಪ್ಪ, ಮಲ್ಲೇಶಪ್ಪ ಸೇರಿದಂತೆ ತಾಲೂಕಿನ ಕಲಾವಿದರು ಉಪಸ್ಥಿತರಿದ್ದರು. ಮೇಟಿ ಯಶವಂತ್ ಕಾರ್ಯಕ್ರಮವನ್ನು ನಿರೂಪಿಸಿದರು.