23 ವರ್ಷಗಳ ನಂತರ ಗುರು-ಶಿಷ್ಯರ ಸಂಗಮ, ಸಹಪಾಠಿಗಳ ಸಂಭ್ರಮ
ಪಾದಪೂಜೆ ಮಾಡಿ, ಪುಷ್ಪವೃಷ್ಠಿ ಮಾಡಿ ಗುರುಭಕ್ತಿ ಮೆರೆದ ಶಿಷ್ಯರು
ಮಹಾಲಿಂಗಪುರ 21: ಕಲಿತ ಮೇಲೆ ಶಾಲೆಯನ್ನು, ಬಲಿತ ಮೇಲೆ ಗುರುಗಳನ್ನು ಮರೆಯಬಾರದು, ಜ್ಞಾನ ನೀಡಿ ಬದುಕಿಗೆ ದಾರಿ ತೋರಿದ ಶಿಕ್ಷಕರನ್ನು ಗೌರವಿಸಿ ಅಕ್ಷರ ಋಣ ತೀರಿಸಬೇಕು ಎಂಬ ಉದ್ದೇಶಕ್ಕಾಗಿ ಹಳೆ ವಿದ್ಯಾರ್ಥಿಗಳು 23 ವರ್ಷಗಳ ನಂತರ ಒಟ್ಟಾಗಿ ಸೇರಿ ನೆನಪಿನ ಬುತ್ತಿ ಬಿಚ್ಚಿ ಅನುಭವಗಳನ್ನು ಮೆಲುಕು ಹಾಕಿದ್ದು ವಿಶೇಷವಾಗಿತ್ತು.
ಪಟ್ಟಣದ ಎಸ್ಸಿಪಿ ಪ್ರೌಢಶಾಲೆಯಲ್ಲಿ 2000-2001ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳು ಇಲ್ಲಿನ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಶನಿವಾರ ದಿ.19ರಂದು ಗುರು ವಂದನೆ ಹಾಗೂ ಸಹಪಾಠಿಗಳ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡರು. ಬೆಳಗ್ಗೆ ಎಲ್ಲ ಗುರುವರ್ಯರನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಬನಶಂಕರಿ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಕರೆದೊಯ್ದುರು. ಮಹಾದ್ವಾರದಿಂದ ವೇದಿಕೆವರೆಗೆ ದಾರಿಗೆ ಹೂಚೆಲ್ಲಿ, ಗುರುಗಳ ಮೇಲೆ ಶಿಷ್ಯರು ಪುಷ್ಪವೃಷ್ಠಿ ಮಾಡಿ ಬರಮಾಡಿಕೊಂಡರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ತಮ್ಮನ್ನು ಅಗಲಿದ ನಾಲ್ವರು ಶಿಕ್ಷಕರಿಗೆ ಆರು ಸಹಪಾಠಿಗಳಿಗೆ ಮೌನಾಚರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಚೇತನಾ ಬಿಸ್ವಾಗರ ಮತ್ತು ಗೌರಿ ಪಾಟೀಲ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು. ಹಳೆ ವಿದ್ಯಾರ್ಥಿನಿ ಹಾಗೂ ಶಿಕ್ಷಕಿ ವೇದಿಕೆ ಮೇಲಿನ ಎಲ್ಲ ಗುರುವರ್ಯರನ್ನು ಸ್ವಾಗತಿಸಿದರು. ಎಲ್ಲ ಗುರು ವೃಂದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಗುರುಗಳ ಕುರಿತು ಮಾತನಾಡಿ, ಗುರಿಯಿಲ್ಲದ ಜೀವನ, ಗರಿಯಿಲ್ಲದ ಹಕ್ಕಿಯಂತೆ ಗುರುವಿಲ್ಲದ ಬದುಕು ಗುರುತಿಲ್ಲದ ಅಸ್ತಿತ್ವದಂತೆ ಕಪ್ಪು ಹಲಗೆ ಮೇಲೆ ಸವೆದು ಹೋಗುವ ಬಳಪದಂತೆ ನಮ್ಮನ್ನು ತಿದ್ದುವುದರಲ್ಲೇ ಬದುಕನ್ನು ಸವೆಸಿದ ಗುರುಗಳ ತ್ಯಾಗ ದೊಡ್ಡದು, ನಮ್ಮ ಹಣೆ ಮತ್ತು ಅವರ ಪಾದ ಸವೆಯುವವರೆಗೆ ನಮಿಸಿದರೂ ಅವರ ಋಣ ತೀರದು ಎಂದರು.
ಶಿಕ್ಷಕರಾದ ಜಿ.ಜಿ.ಹುಬ್ಬಳ್ಳಿ, ಎಸ್.ಬಿ.ಹುಲಕುಂದ, ಎಸ್.ಬಿ.ಕೋರಿಶೆಟ್ಟಿ, ಡಿ.ಎ.ಬಿಸನಾಳ, ಬಿ.ಡಿ.ಗೋಕಾಕ, ಬಿ.ಎನ್.ಅರಕೇರಿ, ಎಂ.ಐ.ಡಾಂಗೆ, ಕೆ.ಎಸ್.ಭಜಂತ್ರಿ, ಪ್ರಭು ಹಿರೇಮಠ, ಆರ್.ಎಸ್.ಯರಗಾಣಿ, ಸುನಿತಾ ಚೌಗಲಾ, ಜೆ.ಆರ್.ಮಠ, ರಾಮು ಮಾದರ ಅವರ ಪಾದಪೂಜೆ ಮಾಡಿ ಸನ್ಮಾನಿಸುವ ಮೂಲಕ ವಿದ್ಯಾಥಿಗಳು ತಮ್ಮ ಗುರುಭಕ್ತಿ ಮೆರೆದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಬ್ಬೊಬ್ಬರಾಗಿ ತಮ್ಮ ಅನಿಸಿಕೆ, ಅಭಿಪ್ರಾಯ, ನೆನಪು, ಅನುಭವಗಳನ್ನು ಹಂಚಿಕೊಳ್ಳುತ್ತ ಕಳೆದು ಹೋದ ಕಲಿಕೆಯ ಕ್ಷಣಗಳನ್ನು ಮೆಲುಕು ಹಾಕಿದರು. ನಂತರ ಸಾಮೂಹಿಕವಾಗಿ ಭೊಜನ ಸವಿದು ಸಾಮೂಹಿಕ ಭಾವಚಿತ್ರ ತೆಗೆಸಿಕೊಂಡು ಒಂದೇ ಫ್ರೇಮ್ನಲ್ಲಿ ಬಂಧಿಯಾದರು. ಸಂಜೆ ತಾವು ಕಲಿತ ಪ್ರೌಢಶಾಲೆಗೆ ತೆರಳಿ ಆವರಣದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ತರಗತಿಯಲ್ಲಿ ವಿದ್ಯಾರ್ಥಿಗಳಂತೆ ಕುಳಿತು ಮತ್ತೆ ಶಿಕ್ಷಕರಿಂದ ಒಂದು ಅವಧಿಯ ಪಾಠ ಹೇಳಿಸಿಕೊಂಡು ಸಂಭ್ರಮಿಸಿದರು.
ಮಹಾಲಿಂಗ ಮಾಳಿ, ಶಂಕರ ಸೊನ್ನದ, ಶಬ್ಬೀರ ಪಟೇಲ, ಮಹಾಂತೇಶ ಕುರಹಟ್ಟಿ, ಮಾರುತಿ ಸುಣಧೋಳಿ, ಶ್ರೀಧರ ಫತೇಪುರ, ರಾಜು ಮೇಲಿನಕೇರಿ, ಸುರೇಶ ಮಡಿವಾಳ, ಸದಾಶಿವ ಸಾಲಿಮಠ, ಆರತಿ ಶೆಟ್ಟರ, ಚೇತನಾ ಬಿಸ್ವಾಗರ, ಗೌರಿ ಪಾಟೀಲ, ಸವಿತಾ ಹೂಗಾರ ಸೇರಿದಂತೆ ನೂರಕ್ಕೂ ಹೆಚ್ಚು ಸಹಪಾಠಿಗಳು ಭಾಗವಹಿಸಿದ್ದರು. ಶಿವಲಿಂಗ ಸಿದ್ನಾಳ ನಿರೂಪಿಸಿ ವಂದಿಸಿದರು.