ನಾರನಗೌಡ ಉತ್ತಂಗಿಗೆ ಗುರುಗೌರವ: ಪಾದಪೂಜೆ
ಮಹಾಲಿಂಗಪುರ 06: ಗುರು ಪೂರ್ಣಿಮೆಯ ಅಂಗವಾಗಿ ಪ್ರತಿ ವರ್ಷದಂತೆ ಸ್ಥಳೀಯ ಸತ್ಯ ಸಾಯಿ ಸೇವಾ ಸಮಿತಿಯಿಂದ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಶಿಕ್ಷಕ ನಾರನಗೌಡ ಉತ್ತಂಗಿ ಇವರನ್ನು ವರ್ಷದ ಗುರುವೆಂದ ಆಯ್ಕೆ ಮಾಡಿ ಪಾದಪೂಜೆಯೊಂದಿಗೆ ಸತ್ಕರಿಸಿ ಗೌರವಿಸಲಾಯಿತು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಹಾಗೂ ಪತ್ರಕರ್ತ ನಾರನಗೌಡ ಉತ್ತಂಗಿ, ನನ್ನಂತಹ ಕಿರಿಯಯನಲ್ಲಿ ಗುರುವಿನ ಹಿರಿಮೆ ಕಂಡು ಗೌರವಿಸಿದ ಹಿರಿಯರಿಗೆ ಕೃತಜ್ಙತೆಗಳು, ನಾನಾಡಿದ ಒಂದು ಒಳ್ಳೆಯ ನುಡಿ, ಮಾಡಿದ ಒಳ್ಳೆಯ ಕಾರ್ಯ ಎಲ್ಲವೂ ಆ ಗುರುವಿನದು, ನಾ ನುಡಿದ ಒಂದು ಬಿರುನುಡಿ ಹಾಗೂ ಒಂದು ತಪ್ಪು ನಡೆ ಅದು ನನ್ನದೇ ಆಗಿರುತ್ತದೆ ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ಜೀವದನಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಗುರುವಿನ ಗುಲಾಮರಾಗುವತನಕ ಬದುಕು ಸಾರ್ಥಕವಾಗಲು ಅಸಾಧ್ಯ ಹಾಗಾಗಿ ಇಂದಿನ ಪೀಳಿಗೆಗೆ ಗುರುವಿನ ಮಹತ್ವದ ಅರಿವು ಅಗತ್ಯ ಎಂದರು.
ಶಿಕ್ಷಕ ಎಸ್.ಐ. ಬಡಿಗೇರ ಮಾತನಾಡಿ, ಸರ್ವ ಕಾಲದಲ್ಲೂ ,ಸರ್ವ ಸ್ಥಳದಲ್ಲಿ ಗೌರವಿಸುವ ಏಕೈಕ ಶಕ್ತಿ ಜ್ಙಾನ, ಜ್ಙಾನಕ್ಕಿಂತ ಮಿಗಿಲಾದ ವಸ್ತು ಜಗದಲ್ಲಿಲ್ಲ, ಅಂತಹ ಅಮೂಲ್ಯ ಜ್ಙಾನ ನೀಡುವ ಗುರು ಸರ್ವಶ್ರೇಷ್ಠ ಎಂದರು.
ಶಿಕ್ಷಕಿ ದೀಪಾ ಬಡಿಗೇರ ಮಾತನಾಡಿದರು.ಸಾಯಿ ಭಜನೆ, ಪೂಜಾ ಕಾರ್ಯಕ್ರಮ ಜರುಗಿದವು. ನಂತರ ಪ್ರಸಾದ ವಿತರಿಸಲಾಯಿತು.
ಸೇವಾ ಸಮಿತಿ ಸಂಚಾಲಕ ನಾರಾಯಣ ರಾವಳ, ಹಿರಿಯರಾದ ಸಿ.ಎಮ್.ಕಟಗಿ, ರವಿ ಘಟ್ನಟ್ಟಿ,ಬೆಳಗಾಂವಕರ, ಮಹಾದೇವ ಕಣಶೆಟ್ಟಿ, ಮಹಾಲಿಂಗಪ್ಪ, ವಜ್ರಮಟ್ಟಿ ಇತರರಿದ್ದರು.