ಬೆಳಗಾವಿ

ಇಂಚಲದ ಡಾ.ಶಿವಾನಂದ ಶ್ರೀಗಳ ಭವ್ಯ ಸ್ವಾಗತ ಮೆರವಣಿಗೆ ; ಅದ್ಧೂರಿ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗಿ

ಇಂಚಲದ ಡಾ.ಶಿವಾನಂದ ಶ್ರೀಗಳ ಭವ್ಯ ಸ್ವಾಗತ ಮೆರವಣಿಗೆ ; ಅದ್ಧೂರಿ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗಿ
Grand welcome procession for Dr. Shivananda Sri of Inchala; thousands of devotees participate in the

ಲೋಕದರ್ಶನ ವರದಿ 


ಹಾರೂಗೇರಿ 22 : ಸುಕ್ಷೇತ್ರ ಹಾರೂಗೇರಿಯ ಚನ್ನವೃಷಭೇಂದ್ರ ದೇವರ ಕೊಂಡಜ್ಜ ಮಹಾರಾಜರ ಲೀಲಾಮಠದಲ್ಲಿ 43ನೇ ವೇದಾಂತ ಪರಿಷತ್ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಇಂಚಲ-ಹಾರೂಗೇರಿ ಮಠಗಳ ಪೀಠಾಧ್ಯಕ್ಷ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ ಭವ್ಯ ಸ್ವಾಗತ ಮೆರವಣಿಗೆ ನಡೆಯಿತು. 

  ಮಧ್ಯಾಹ್ನ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮೂರ್ತಿಗೆ ಸುವರ್ಣ ಕೀರೀಟ ಧಾರಣೆ, ಅಭಿಷೇಕ ಹಾಗೂ ಮಹಾಪೂಜೆ ನೆರವೇರಿಸಿದರು. ಲೀಲಾಮಠದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೊರಟ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಪಾಲ್ಗೊಂಡಿದ್ದರು. ಮೆರವಣಿಗೆ ಸಾಗುವ ಮಾರ್ಗವನ್ನು ರಂಗೋಲಿ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ರಸ್ತೆಗಳು ದೀಪಾಲಂಕಾರದಿಂದ ಕಂಗೋಳಿಸಿದವು. 

  ನಾನಾ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಮೆರಗು ತಂದವು. ಡೊಳ್ಳು, ತಾಳ, ಮಂಗಳವಾಧ್ಯ, ಕಂಸಾಳೆ, ಭಜನೆ, ಕುದುರೆ ಕುಣಿತ, ಬ್ಯಾಂಡಸೆಟ್, ಡೊಳ್ಳುಕುಣಿತ, ತಮಟೆ, ಸೋಬಾನಪದ, ರೂಪಕಗಳು, ವೇಷಭೂಷಣ, ಗಾಯನ ತಂಡ ಸೇರಿದಂತೆ ಹಲವಾರು ಕಲಾತಂಡಗಳು ಗಮನ ಸೆಳೆದವು. ಶರಣ ಶರಣೆಯರು ಓಂ ನಮಃ ಶಿವಾಯ ಮಂತ್ರ ಪಠಿಸುತ್ತಿದ್ದರು. ಮೆರವಣಿಗೆ ರಾತ್ರಿ ಚನ್ನವೃಷಭೇಂದ್ರ ಲೀಲಾಮಠಕ್ಕೆ ಆಗಮಿಸಿತು. 

   ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು 43ನೇ ವೇದಾಂತ ಪರಿಷತ್ ಉದ್ಘಾಟಿಸಿ, ಆಧ್ಯಾತ್ಮಿಕ, ಪ್ರವಚನ, ಕೀರ್ತನೆ ಹಾಗೂ ನಾನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಆಶೀರ್ವಚನ ನೀಡುತ್ತ ಮಹಾತ್ಮರ ಪುಣ್ಯಸ್ಥಾನ ಹಾರೂಗೇರಿಯಲ್ಲಿ ನಡೆಯುತ್ತಿರುವ ವೇದಾಂತ ಪರಿಷತ್ ಭಕ್ತರಿಗೆ ಅರಿವಿನ ಜ್ಞಾನ ನೀಡುವ ಅಕ್ಷಯ ಪಾತ್ರೆ. ಒಂದಾಗಿ ಬಾಳಿರಿ, ವಿಶ್ವಶಾಂತಿ ಪಡೆಯಿರಿ ಎಂಬ ಸಂದೇಶ ಸಾರುವ ಮಹಾತ್ಮರ ಪ್ರವಚನ ಮನುಕುಲದ ಉದ್ಧಾರಕ್ಕೆ ದಾರಿಯಾಗಿದೆ, ಭಗವಂತನ ಅನುಗ್ರಹದಿಂದ ಜ್ಞಾನದ ದಾರಿ ಸುಲಭ ಎಂದು ಆಶೀರ್ವಚನ ನೀಡಿದರು. 

  ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಮಾಜಿ ಶಾಸಕ ಪಿ.ರಾಜೀವ್, ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ, ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ವಿಠ್ಠಲರಾವ ಬಂತಿ, ನೇಮಣ್ಣ ಕೊತ್ತಲಗಿ, ಬಾಬು ಪರಮಗೌಡರ, ರಾಜು ಕರ್ಣವಾಡಿ, ವಿಜಯ ಬಂತಿ, ರಾಘವೇಂದ್ರ ದೇಶಪಾಂಡೆ, ಶಶಿಧರ ಶಿಂಗೆ, ಗೋಪಾಲ ಧರ್ಮಟ್ಟಿ, ಭಗವಂತ ಸೂರಣ್ಣವರ, ತಮ್ಮಣ್ಣಿ ಕುರಿ, ಶ್ರೀಶೈಲಗೌಡ ಉಮರಾಣಿ, ಲಾಲಸಾಬ ಜಮಾದಾರ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ