ಚಿಕ್ಕೋಡಿಯಲ್ಲಿ ಏಪ್ರಿಲ್ 4ರಂದು ಭವ್ಯ “ವೃತ್ತಿ ಮೇಳ”- ಡಯಟ ಪ್ರಾಚಾರ್ಯ ಸಂಜು ಹುಲ್ಲೋಳ್ಳಿ ಮಾಹಿತಿ
ಚಿಕ್ಕೋಡಿ 26 : ವಿದ್ಯಾರ್ಥಿಗಳ ಭವಿಷ್ಯದ ದಿಕ್ಕು ಸ್ಪಷ್ಟಪಡಿಸಲು ಹಾಗೂ ವಿವಿಧ ವೃತ್ತಿ ಆಯ್ಕೆಗಳ ಬಗ್ಗೆ ಸಮಗ್ರ ಅರಿವು ಮೂಡಿಸಲು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಚಿಕ್ಕೋಡಿ ವತಿಯಿಂದ “ವೃತ್ತಿ ಮೇಳ”ವನ್ನು ಏಪ್ರಿಲ್ 4, 2026 ರಂದು ಪಟ್ಟಣದ ಜಿಟಿಟಿಸಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು, ಈ ಮೇಳವು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ತಿರುವಾಗಲಿದೆ
ಎಂದು ಡಯಟ್ ಪ್ರಾಚಾರ್ಯ ಸಂಜು ಹುಲ್ಲೋಳ್ಳಿ ಹೇಳಿದರು.ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ ಅವರು, ಡಯಟ್ ಚಿಕ್ಕೋಡಿಯಲ್ಲಿ ವೃತ್ತಿಪರ ಹಾಗೂ ವೃತ್ತಿ ಮಾರ್ಗದರ್ಶನ ಘಟಕವನ್ನು ಸ್ಥಾಪಿಸಲಾಗಿದ್ದು, ಅದರ ಅಡಿಯಲ್ಲಿ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ದಿಟ್ಟ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಮೇಳವನ್ನು ಪಟ್ಟಣದ ಜಿಟಿಟಿಸಿ ಕಾಲೇಜಿನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ವೃತ್ತಿ ಮೇಳದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ವಿದ್ಯಾಭ್ಯಾಸ ಮಾರ್ಗಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತದೆ. ಪಿ.ಯು.ಸಿ, ಐಟಿಐ, ಡಿಪ್ಲೋಮಾ, ಬಿ.ಇ., ಮೆಡಿಕಲ್, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳ ಆಯ್ಕೆಗಳು, ಅವುಗಳ ಮಹತ್ವ ಹಾಗೂ ಅವಕಾಶಗಳ ಕುರಿತು ತಜ್ಞರು ವಿವರಿಸಲಿದ್ದಾರೆ. ವಿದ್ಯಾರ್ಥಿಗಳ ವೈಯಕ್ತಿಕ ಸಾಮರ್ಥ್ಯ, ಆಸಕ್ತಿ ಮತ್ತು ಗುರಿಗಳ ಆಧಾರದ ಮೇಲೆ ಸೂಕ್ತ ಮಾರ್ಗದರ್ಶನ ನೀಡುವ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಇದಲ್ಲದೆ, ವಿವಿಧ ಕ್ಷೇತ್ರಗಳ ಉದ್ಯೋಗಾವಕಾಶಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು,
ಖ್ಯಾತ ಸಂಸ್ಥೆಗಳ ತಜ್ಞರಿಂದ ಸಲಹೆ-ಮಾರ್ಗದರ್ಶನ, ಪೋಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳೂ ಈ ಮೇಳದ ಪ್ರಮುಖ ಆಕರ್ಷಣೆಯಾಗಿವೆ. ವಿದ್ಯಾರ್ಥಿಗಳಲ್ಲಿ ಉಂಟಾಗುವ ಎಲ್ಲಾ ರೀತಿಯ ಸಂಶಯಗಳಿಗೆ ತಜ್ಞರು ಸ್ಥಳದಲ್ಲೇ ಉತ್ತರ ನೀಡಲಿದ್ದಾರೆ. ಈ ಮೇಳವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಸರಿಯಾದ ವೃತ್ತಿ ಆಯ್ಕೆ ಮಾಡಲು ನೆರವಾಗಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಯಟ್ ಚಿಕ್ಕೋಡಿ ಪ್ರಾಚಾರ್ಯ ಸಂಜು ಹುಲ್ಲೋಳ್ಳಿ ಮನವಿ ಮಾಡಿದ್ದಾರೆ.