ಮತದಾರರಿಗೆ ನೀಡಿದ ಭರವಸೆ ಈಡೇರಿಸಿದ ಗ್ರಾಪಂ ಸದಸ್ಯ ರಂಗಪ್ಪ
ಮಹಾಲಿಂಗಪುರ 07: ಹಲವು ರಾಜಕೀಯ ನಾಯಕರು, ಜನಪ್ರತಿನಿಧಿಗಳು ಪ್ರಜೆಗಳ ಮತಗಳನ್ನು ಪಡೆಯಲು ಅನೇಕ ಭರವಸೆಗಳನ್ನು ನೀಡಿ, ನಂತರದ ದಿನಗಳಲ್ಲಿ ಮಂಗ ಮಾಯವಾಗುತ್ತಾರೆ. ಇದಕ್ಕೆ ಭಿನ್ನವೆಂಬಂತೆ ಮತದಾರರಿಗೆ ನೀಡಿದ ಭರವಸೆಯನ್ನು ಸ್ವಂತ ಖರ್ಚಿನಲ್ಲಿ ಸದಸ್ಯ ಪರಿವಾರದವರೇ ನೆರವೇರಿಸಿ ಗ್ರಾಮಕ್ಕೆ ಮಾದರಿಯಾಗಿದ್ದಾರೆ.
ಇತ್ತೀಚೆಗೆ ನಡೆದ ಮುಧೋಳ ತಾಲೂಕಿನ ನಂದಗಾವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಂಗಪ್ಪ ಹೊಸೂರ್ ವಾರ್ಡ್ ನಂಬರ್ 2ರಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದರು. ಚುನಾವಣೆಗೆ ಮುಂಚಿತವಾಗಿ ವಾರ್ಡ್ ನಲ್ಲಿರುವ ಶುದ್ಧ ಕುಡಿಯುವ ನೀರಿನ ಸಮಸ್ಯೆಯ ಬಗೆಯೂ ಅರಿತವರಾಗಿ ನೀಗಿಸುವ ಭರವಸೆಯನ್ನೂ ನೀಡಿದ್ದರು.
ಈ ನವಗ್ರಾಮ ಬಡಾವಣೆಯ 500ಪರಿವಾರಗಳು 03ಕಿ.ಮೀ ಅಂತರದ ಹಳೆ ನಂದಗಾವ ಗ್ರಾಮದಿಂದ ಶುದ್ಧ ಕುಡಿಯುವ ನೀರನ್ನು ತರಬೇಕಾಗಿತ್ತು. ಇದಕ್ಕೆ ಪರಿಹಾರೋಪಾಯವಾಗಿ ಹೊಸೂರ ಪರಿವಾರದವರು ಸರ್ಕಾರದ ಹಣಕಾಸಿನ ನೆರವಿಲ್ಲದೆ ಮೂರು ಲಕ್ಷ ರೂಗಳ ತಮ್ಮ ಸ್ವಂತ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ದಿ. ವೆಂಕಪ್ಪ ಗೋ ಹೊಸೂರ್ ಇವರ ಸ್ಮರಣಾರ್ಥ ನಿರ್ಮಿಸಿದರು. ಘಟಕವನ್ನು ಉದ್ಘಾಟನ ಸಮಾರಂಭದೊಂದಿಗೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಗೆ ಹಸ್ತಾಂತರಿಸಿ ಇದರ ಜೊತೆ ಜೊತೆಯಲ್ಲಿಯೇ ಪ್ರತಿ ಕುಟುಂಬಕ್ಕೂ ಉಚಿತವಾಗಿ 20ಲೀಟರ್ 500ಬೋಟಲಗಳನ್ನು ನೀಡಿ ತಮ್ಮ ಔದಾರ್ಯತೆಯನ್ನು ಮೆರೆದಿದ್ದಾರೆ.
ಈ ಅನಾನುಕೂಲತೆಯನ್ನು ತಪ್ಪಿಸಿದ ಹೊಸೂರು ಪರಿವಾರದವರಿಗೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಹಸ್ತಾಂತರ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮನವ್ವ ಬಾರ್ಕೋಲ್, ಉಪಾಧ್ಯಕ್ಷೆ ಸುಜಾತ ಪೂಜಾರಿ ಗ್ರಾಮದ ಹಿರಿಯರಾದ ಬಿ.ಜಿ. ಹೊಸೂರ್, ರಾಜು ಬಾರ್ಕೋಲ್, ಹನುಮಂತ್ ಗೊಬ್ಬರದ, ರಾಮಚಂದ್ರ ಜಾದವ್, ಸುರೇಶ್ ಹೊಸೂರ್, ಶಿವನಗೌಡ ಪಾಟೀಲ, ಅರುಣ ತಿಮ್ಮಸಾನಿ, ಮಂಜುನಾಥ್ ಹೊಸೂರ್, ವಿನೋದ್ ಪಾಟೀಲ್, ಕೆಕೆ ಕುಲಕರ್ಣಿ, ಮಲ್ಲಪ್ಪ ಗುರವ ಅಲ್ಲದೆ ಗ್ರಾಮದ ಗುರು-ಹಿರಿಯರು, ಗ್ರಾಮ ಪಂಚಾಯತ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.