ಗ್ರಾಮೀಣ ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕರೆ
ಲೋಕದರ್ಶನ ವರದಿ
ಗ್ರಾಮೀಣ ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕರೆ
ಜಮಖಂಡಿ 12: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಆರ್ಥಿಕ ನೆರವಿನೊಂದಿಗೆ ಜಮಖಂಡಿ ತಾಲೂಕಿನ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಗುಣಮಟ್ಟದ ಉತ್ಪನ್ನಗಳನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ್ ಅವರು ಬಿಡುಗಡೆಗೊಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಸಂಘಗಳ ಸ್ವಾವಲಂಬನೆ ಹಾಗೂ ಆರ್ಥಿಕ ಸಬಲೀಕರಣದ ಉದ್ದೇಶದಿಂದ ವಿವಿಧ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಮಹಿಳೆಯರ ಕೌಶಲ್ಯಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾರ್ವಜನಿಕರು ಹಾಗೂ ತಾಲೂಕಿನ ವಿವಿಧ ಇಲಾಖೆಗಳು ಈ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಹಕರಿಸಬೇಕು ಎಂದು ಕರೆ ನೀಡಿದರು.
ಹುನೂರು ಗ್ರಾಮದ ಸನ್ಮತಿ ಸಂಘದ ಗುಣಮಟ್ಟದ ಇಲಕಲ್ ಸೀರೆಗಳು, ಜಂಬಗಿ ಬಿಕೆ ಗ್ರಾಮದ ಹನುಮಾನ್ ಸಂಘದ ಶುದ್ಧ ಗಾಣದ ಎಣ್ಣೆ, ಮುತ್ತೂರು ಗ್ರಾಮದ ಬಸವೇಶ್ವರ ಸಂಘದ ವಿವಿಧ ರೊಟ್ಟಿಗಳು, ತುಂಬಳ ಗ್ರಾಮದ ಭೂಮಿ ಸಂಘದ ಸಾವಯವ ಬೆಲ್ಲ ಹಾಗೂ ಗಣೀ ಗ್ರಾಮದ ಭೂಮಿ ಸ್ವಸಹಾಯ ಸಂಘದ ಸ್ವಚ್ಛತಾ ಉತ್ಪನ್ನಗಳನ್ನು ಈ ಸಂದರ್ಭದಲ್ಲಿ ಪರಿಚಯಿಸಲಾಯಿತು.
ಮಹಿಳಾ ಸಂಘಗಳ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಮಾರುಕಟ್ಟೆ ದೊರೆತರೆ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಸಂಜು ಹಿಪ್ಪರಗಿ, ಉಮೇಶ ಸಾವಳಗಿ, ನರೇಂದ್ರ ಕೆಂಪನವರ, ಪ್ರಕಾಶ ಬಾಡಗಿ, ಬಸವರಾಜ ಬಾವಲತ್ತಿ, ಸೋಮೇಶ ಹಿರೇಮಠ ಹಾಗೂ ತಾಲೂಕಿನ ಮಹಿಳಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.