ಸರ್ಕಾರ ಸದಾ ನೇಕಾರರ ಬೆನ್ನಿಗಿದ್ದೇವೆ: ಶಾಸಕ ಸಿದ್ದು
ಮಹಾಲಿಂಗಪುರ 15: ಸಂಕಷ್ಟದ ಸಂದರ್ಭದಲ್ಲಿ ದುಡುಕಿನ ನಿರ್ಧಾರ ಮಾಡಿ ಯಾರೂ ಪ್ರಾಣ ಕಳೆದುಕೊಳ್ಳಬಾರದು ನಾನು ಮತ್ತು ನಮ್ಮ ಸರ್ಕಾರ ಸದಾ ನೇಕಾರರ ಬೆನ್ನಿಗಿದ್ದೇವೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಸ್ಥಳೀಯ ಚಿಮ್ಮಡ ಗಲ್ಲಿಯ ನಿವಾಸಿ ಮಲ್ಲಪ್ಪ ಅದೃಶಪ್ಪ ಯಡಪ್ಪನವರ ನಿವಾಸಕ್ಕೆ ಭೇಟಿ ನೀಡಿ ಮೃತನ ಕುಟಂಬಕ್ಕೆ 10 ಸಾವಿರ ರೂ. ನಗದು ನೀಡಿ ಮಾತನಾಡಿದರು.
ಪಕ್ಷಭೇದ ಮರೆತು ಸಂಕಷ್ಟದಲ್ಲಿರುವ ನೇಕಾರರಿಗೆ ಸಹಾಯ ಮಾಡವುದು ಬಿಟ್ಟು ಕೆಲವು ಸ್ವಯಂ ಘೋಷಿತ ನೇಕಾರ ಮುಖಂಡರು ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಇದು ಖಂಡನೀಯ. ಯಡಪ್ಪನವರ ಆತ್ಮಹತ್ಯೆ ನಡೆದಾಗ ನಾನು ಸ್ಥಾನಿಕವಾಗಿರಲಿಲ್ಲ ಫೋನ್ ಮೂಲಕ ವಿಷಯ ತಿಳಿದು ನೇಕಾರರ ಸಾವಿಗೆ ಬಹಳ ಬೇಜಾರಾಯಿತು. ಸರ್ಕಾರ ಹಾಗೂ ನಮ್ಮ ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಪರಿವಾರಕ್ಕೆ ಒದಗಿಸಲಾಗುವುದು ಎಂದರು.
ನಂತರ ಪುರಸಭೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ನಮ್ಮ ಭಾಜಪ ಸರ್ಕಾರ ನೇಕಾರರಿಗೆ ಸಾಕಷ್ಟು ಸೌಲಭ್ಯ ನೀಡಿದ್ದು ಯಾವಾಗಲೂ ನೇಕಾರರ ಪರವಾಗಿದೆ ಎಂಬುದನ್ನು ಸಾಬೀತು ಮಾಡಿದೆ ಹಾಗೂ ಕೊರೋನಾ ಸಂಕಷ್ಟ ಕಾಲದಲ್ಲಿಯೂ ಸಹ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ವಿರೋಧಪಕ್ಷಗಳು ಮತ್ತು ಕೆಲವು ಸ್ವಯಂಘೋಷಿತ ನಾಯಕರು ಸುಳ್ಳು ಆರೋಪ ಮಾಡಿ ಲಾಭ ಪಡೆಯುವುದು ಸಾಧ್ಯವಿಲ್ಲ ನನ್ನ ಮೇಲೆ ಮತ್ತು ನಮ್ಮ ಸರ್ಕಾರದ ಮೇಲೆ ನೇಕಾರರಿಗೆ ತುಂಬಾ ಭರವಸೆ ಇದೆ ಆದ್ದರಿಂದಲೇ ನಾನು ತೆರದಾಳ ಕ್ಷೇತ್ರದಿಂದ ಮೂರು ಸಾರಿ ಆರಿಸಿ ಬಂದಿದ್ದೇನೆ. ಒಂದೇ ಬಾರಿಗೆ ಮಾಜಿ ಸಚಿವೆ ಉಮಾಶ್ರೀ ಅವರನ್ನು ಕ್ಷೇತ್ರದ ಜನ ತಿರಸ್ಕರಿಸಿದ್ದಾರೆ ಎಂದರು.
ಭಾಜಪ ಗ್ರಾಮೀಣ ಕ್ಷೇತ್ರದ ಅಧ್ಯಕ್ಷ ಸುರೇಶ ಅಕ್ಕಿವಾಟ,ಮಾಜಿ ಅಧ್ಯಕ್ಷ ಶೇಖರ ಅಂಗಡಿ, ನೇಕಾರ ನಾಯಕ ಮನೋಹರ ಶಿರೋಳ, ಜಮೀರ್ ಯಕ್ಸಂಬಿ, ಜಿ.ಎಸ್.ಗೊಂಬಿ,ಪ್ರಕಾಶ ಮರೇಗುದ್ದಿ, ವಿಕ್ರಮ ಕುಳ್ಳೂರ, ಪುರಸಭಾ ಮುಖ್ಯಾಧಿಕಾರಿ ಎಚ್. ಎಸ್. ಚಿತ್ತರಗಿ, ಕಂದಾಯ ಅಧಿಕಾರಿ ನಾಮದೇವ ಲಮಾಣಿ ಇದ್ದರು.