‘ಸರಕಾರಿ ಶಾಲೆ ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ’
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 02: ಸರಕಾರಿ ಶಾಲೆಗಳೆಂದರೆ ಮೂಗು ಮೂರಿಯುವ ಪ್ರಸ್ತುತ ದಿನಗಳಲ್ಲಿ ಪಟ್ಟಣದ ಕುರುದಗಡ್ಡಿ ಯುವ ಶಕ್ತಿ ವೇದಿಕೆಯು 23ನೇ ವಾರ್ಡ್ನ ಸರಕಾರಿ ಶಾಲೆ ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬಂತೆ ಶಾಲೆಯ ಚಿತ್ರಣವನ್ನೆ ಬದಲಾಗಿದೆ.
ಇದು ಸರ್ಕಾರಿ ಶಾಲೆಯ ಮಕ್ಕಳ ಬದುಕು ರೂಪಿಸುವ, ಶಿಕ್ಷಣ ಬಂಡಿ, ಓದುವ ರೈಲು. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ರೈಲು ಭೋಗಿ ಮಾದರಿಯ ತರಗತಿ ಕೊಠಡಿಗಳಿಂದ ಕಂಗೊಳಿಸುತ್ತಾ ಪೋಷಕರನ್ನು, ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿರುವ ನೂತನ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ 23ನೇ ವಾರ್ಡಿನಲ್ಲಿರುವ ಕುರುದಗಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟನೆ “ಕುರುದಗಡ್ಡಿ ಯುವಶಕ್ತಿ ವೇದಿಕೆ (ರಿ) ಅಧ್ಯಕ್ಷರಾದ ಪಿ.ಸೋಮಪ್ಪ ಹಾಗೂ ಎಲ್ಲಾ ಯುವಕರ ಪರಿಶ್ರಮದಿಂದ ಸರ್ಕಾರಿ ಶಾಲೆ ರೈಲು ಮಾದರಿ ಶಾಲೆಯಾಗಿ ಬದಲಾಗಿದೆ. ವೃತ್ತಿಯಲ್ಲಿ ಪೇಂಟರ್ಗಳಾಗಿ, ಎಲೆಕ್ಟ್ರೇಷಿಯನ್ಗಳಾಗಿ, ಗಾರೆ ಕೆಲಸಗಾರರಾಗಿ, ಪ್ಲಂಬರ್ಗಳಾಗಿ, ಕಾರ್ಮಿಕರಾಗಿ ದುಡಿಯುತ್ತಿರುವ ಯುವಕರೆಲ್ಲರೂ ಸುಮಾರು 40 ಸಾವಿರಕ್ಕೂ ಹೆಚ್ಚಿನ ಹಣವನ್ನು ಸರ್ಕಾರಿ ಶಾಲೆಗಾಗಿ ಖರ್ಚು ಮಾಡಿರುವುದಲ್ಲದೆ, ಸ್ವತಃ ಶ್ರಮದಾನದ ಮೂಲಕ ಶಾಲೆಗೆ ರೈಲು ಮಾದರಿ ಬಣ್ಣ ಬಳಿದು ಶಾಲೆಯನ್ನು ಆಕರ್ಷಣೀಯವಾಗಿಸಿರುವುದು ವಿಶೇಷವಾಗಿದೆ. ಯುವಕರ ಈ ಕಾರ್ಯಕ್ಕೆ ಕಲಾವಿದರಾದ ಟಿ.ಕೊಟ್ರೇಶ್ ಮತ್ತು ಡಿ.ರಾಮಣ್ಣ ಕೈಜೋಡಿಸಿ ಕಲಾಸೇವೆ ಒದಗಿಸಿದ್ದಾರೆ. ಶಾಲೆಯ ಮುಖ್ಯ ಗುರುಗಳಾದ ಕೆ.ಮಲ್ಲಪ್ಪ ಹಾಗೂ ಸಹ ಶಿಕ್ಷಕರಾದ ಹರೀಶ್ರವರ ಮಾರ್ಗದರ್ಶನದಲ್ಲಿ ಉತ್ತಮ ಕಲಿಕಾ ವಾತಾವರಣ ರೂಪುಗೊಂಡಿದ್ದು, 2021-22ನೇ ಸಾಲಿನಲ್ಲಿ ದಾಖಲಾತಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಖಾಸಗಿ ಶಾಲೆಗಳ ಹಾವಳಿಯ ನಡುವೆಯೂ ಒಂದನೇ ತರಗತಿಗೆ 23 ಮಕ್ಕಳು ದಾಖಲಾಗಿದ್ದು, ಒಟ್ಟು 51 ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕುರುದಗಡ್ಡಿ ಯುವಶಕ್ತಿ ವೇದಿಕೆಯ ಯುವಕರ ಈ ಮಾದರಿ ಕಾರ್ಯವನ್ನು ಸ್ಮರಿಸಿ, ಕುರದಗಡ್ಡಿ ಸರ್ಕಾರಿ ಶಾಲೆಯ ಪೋಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಊರಿನ ಮುಖಂಡರು, ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನೂತನ ವರ್ಷಾರಂಭದ ದಿನದಂದು ಶಾಲೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಯುವಶಕ್ತಿ ವೇದಿಕೆಯ ಎಲ್ಲಾ ಸದಸ್ಯರಿಗೆ “ಅಭಿನಂದನಾ ಫಲಕ” ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕದ ಕೊಡುಗೆ ನೀಡಿದ 23ನೇ ವಾರ್ಡಿನ ನೂತನ ಪುರಸಭ ಸದಸ್ಯರಾದ ಜೋಗಿ ಹನುಮಂತಪ್ಪರವರನ್ನು ಅಭಿನಂದಿಸಲಾಯಿತು.
ಅಭಿನಂದನಾ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬೋರಯ್ಯ ಉದ್ಘಾಟಿಸಿದರು. ಇಸಿಒ ಮುಸ್ತಾಕ್ ಅಹ್ಮದ್, ಬಿ.ಆರ್.ಸಿ.ಗಳಾದ ಭೀಮಸೇನಪ್ಪ, ಮಲ್ಲೇಶ್ನಾಯ್ಕ, ಗೋಣಿಬಸಪ್ಪ, ಮಂಜುನಾಥ, ಸಿ.ಆರ್.ಪಿ.ಗಳಾದ ಮೋರಾ್ನಳ್, ಎಸ್.ಗೌರಮ್ಮ, ಯುವಶಕ್ತಿ ವೇದಿಕೆಯ ಹರೀಶ್ ಶಾಸ್ತ್ರಿ, ಎ.ಪಿ.ವೆಂಕಟೇಶ್, ಗಾಳೆಪ್ಪ, ಮಂಜುನಾಥ, ಶಿಕ್ಷಕರ ಸಂಘದ ಹನುಮರೆಡ್ಡಿ, ದಾದೀಬೀ, ಬಿ.ಕೊಟ್ರ್ಪ, ಮಂಜುನಾಥ ಇಟಿಗಿ, ಸೋಮಶೇಖರ್, ದೀಪಿಕಾ ಕೆ.ಬಿ, ಶಾಂತಕುಮಾರಿ, ಕುರುದಗಡ್ಡಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.