ಜನರ ಸಂಕಷ್ಟಕ್ಕೆ ಧಾವಿಸದ ಸರಕಾರ, ವರ್ಗಾವಣೆ ದಂಧೆ, ಶಾಸಕರ ಸಮರದಲ್ಲಿ ಕಾಲಹರಣ : ಮಾಜಿ ಸಿಎಂ ಬೊಮ್ಮಾಯಿ ಆರೋಪ
ಬೆಳಗಾವಿ : ಪ್ರವಾಹ, ಅತಿವೃಷ್ಟಿಯಿಂದ ನಲುಗಿರುವ ರಾಜ್ಯ ಜನರಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಪ್ರವಾಹ ನೇರವಿಗೆ ಬಾರದೆ, ಕೇವಲ ವರ್ಗಾವಣೆ ದಂಧೆಯಲ್ಲಿ ತೋಡಗಿದೆ. ಹಾಗೂ ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನದಲ್ಲಿ ನಿರತವಾಗಿದ್ದು, ಜನರ ಸಂಕಷ್ಟಕ್ಕೆ ಸರಕಾರ ಧಾವಿಸುತ್ತಿಲ್ಲ. ಶಾಸಕರ ಸಮರಗೋಸ್ಕರ ಕಾಲ ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ. ಸರಕಾರ ಸಂಪೂರ್ಣ ಎಲ್ಲದರಲ್ಲೂ ವಿಫಲವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಠಿಯಿಂದ ಮನೆಗಳ ಹಾನಿ, ಜಾನುವಾರು ಸಾವು ದೊಡ್ಡ ಪ್ರಮಾಣದಲ್ಲಿ ಆಗಿದೆ. ಸುಮಾರು 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ, ಉಳಿದ ಜಿಲ್ಲೆಗಳಲ್ಲಿ ಬರದ ಛಾಯೆ ಇದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಗಮನಿಸುತ್ತಿಲ್ಲ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ಸಂವಾದ ಮಾಡುವುದು ಬಿಟ್ಟರೆ ಯಾವುದೇ ಪರಿಹಾರ ಕಾರ್ಯ ನಡೆದಿಲ್ಲ. ಮನೆ ಕಳೆದುಕೊಂಡವರಿಗೆ ತಕ್ಷಣವೇ 10 ಸಾವಿರ ಪರಿಹಾರ ಕೊಡಬೇಕು, ಅದು ಸಾಧ್ಯವಾಗಿಲ್ಲ. ಬೆಳೆ ನಾಶ ಆಗಿರುವುದಕ್ಕೆ ಪ್ರಾಥಮಿಕ ಸಮೀಕ್ಷೆ ಕೂಡ ಆಗಿಲ್ಲ. ದೊಡ್ಡ ಪ್ರಮಾಣದಲ್ಲಿ ಪ್ರಾಣಹಾನಿ ಆಗಿದೆ, ಸರ್ಕಾರ ಇದನ್ನು ಗಮನಿಸುತ್ತಿಲ್ಲ ಎಂದು ನುಡಿದರು.
ಯಾವ ಸಚಿವರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಬರಪೀಡಿತ ಪ್ರದೇಶಗಳಿಗೆ ಬೇರೆ ಬೆಳೆ ಬೆಳೆಯಲು ಬೀಜ ಗೊಬ್ಬರ ಕೊಡುವ ವ್ಯವಸ್ಥೆ ಆಗಿಲ್ಲ. ಸರ್ಕಾರದವರು ಕೇವಲ ರಾಜಕಾರಣದಲ್ಲಿ ನಿರತರಾಗಿದ್ದಾರೆ. ತಮ್ಮ ಸ್ಥಾನವನ್ನು ಉಳಿಸಿ ಕೊಳ್ಳಲು ಹೆಣಗಾಡುತ್ತಿದ್ದಾರೆ. ಸಚಿವರು ಹಾಗೂ ಶಾಸಕರ ನಡುವೆ ಇರುವ ಸಮರ ಬಗೆಹರಿಸಲು ಮುಖ್ಯಮಂತ್ರಿಗಳು ಸಮಯ ಕಳೆಯುತ್ತಿದ್ದಾರೆ.ರಾಜ್ಯ ಜನರು ಇಂದು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ, ಅವರ ನೆರವಿಗೆ ಸರ್ಕಾರ ಧಾವಿಸಿಲ್ಲ. ಕೂಡಲೇ ಎಲ್ಲ ಸಚಿವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಡಬೇಕು. ಸಾವು ನೋವಾದ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಬೇಕು ಎಂದು ಆಗ್ರಹಿಸುವೆ ಎಂದು ತಿಳಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ಪರಿಹಾರ ನೀಡಿದ್ದೇವೆ. ಆ ರೀತಿಯ ಮಾನದಂಡ ಅನುಸರಿಸಿ ಈಗಲೂ ಪರಿಹಾರ ನೀಡಬೇಕು. ತಕ್ಷಣವೇ ಸಂತ್ರಸ್ತರಿಗೆ 10 ಸಾವಿರ ಪರಿಹಾರ ಕೊಡಬೇಕು.ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರ ಬೆಲೆ ಪರಿಹಾರ ನಾವು ಕೊಟ್ಟಂಗೆ ಈಗಲೂ ಕೊಡಬೇಕು ಎಂದು ಒತ್ತಾಯಿಸಿದರು.
2600 ಕೋಟಿ ಪರಿಹಾರ ನಾವು ಒಂದೇ ತಿಂಗಳಲ್ಲಿ ನೀಡಿದ್ದೇವೆ. ಕೇಂದ್ರ ಸರ್ಕಾರ ಒಣ ಬೇಸಾಯಕ್ಕರ 6500 ಪರಿಹಾರ ನೀಡಿತ್ತು, ನಾವು ಅದಕ್ಕೆ 1300 ಸಾವಿರ ನೀಡಿದ್ವಿ. ನೀರಾವರಿ ಆಧಾರಿತ ಜಮೀನಿಗೆ 1500 ಸಾವಿರ ನೀಡಿದ್ರೆ ನಾವು 25000 ಪರಿಹಾರ ನೀಡಿದ್ವಿ. ತೋಟಗಾರಿಕೆ ಬೆಳೆಗಳಿಗೆ ಕೇಂದ್ರ 18 ಸಾವಿರ ನೀಡಿದ್ರೆ ನಾವು 28 ಸಾವಿರ ಪರಿಹಾರ ಕೊಟ್ಟಿದ್ವಿ. ಅದೇ ಮಾನದಂಡ ಅನುಸರಿಸಿ ಈಗಲೂ ರೈತರಿಗೆ ಪರಿಹಾರ ಕೊಡಬೇಕು.
ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ನಮ್ಮ ಅನುಭವದಿಂದ ಹೇಳುತ್ತಿದ್ದೇನೆ, ತಕ್ಷಣವೇ ಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ಹಾಗಾದಿದ್ದರೆ ಈ ಸರ್ಕಾರ ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ನಾವು ಎಸ್‌ಡಿಆರ್‌ಎಫ್ ಪರಿಹಾರ ಜೊತೆಗೆ ರಾಜ್ಯ ಸರ್ಕಾರದಿಂದಲೂ ಪರಿಹಾರ ನೀಡಿದ್ದೇವೆ. ಐದು ಲಕ್ಷ ಪರಿಹಾರ ನೀಡಿ ಸಂತ್ರಸ್ತರಿಗೆ ಮನೆ ನಿರ್ಮಿಸಲು ಅನುಕೂಲ ಮಾಡಿದ್ದೇವೆ. ಬಿಎಸ್‌ವೈ ನೇತೃತ್ವದಲ್ಲಿ ತೀರ್ಮಾನ ತೆಗೆದುಕೊಂಡು ಈ ಕ್ರಮ ಕೈಗೊಂಡಿದ್ದೇವೆ.
ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ, ಅಲ್ಪ ಬಿದ್ದ ಮನೆಗಳಿಗೆ 3 ಲಕ್ಷ ಪರಿಹಾರ ಕೊಟ್ಟಿದ್ದೇವೆ. ಸಂಕಷ್ಟದಲ್ಲಿರುವ ಪ್ರವಾಹಪೀಡಿತರ ನೆರವಿಗೆ ನಾವು ಬಂದಿದ್ದೇವು.ಇಲ್ಲವಾದರೆ ಈ ಸರ್ಕಾರ ಬಡವರಿಗೆ ಅನ್ಯಾಯ ಮಾಡಿದಂಗೆ ಎಂದು ಬೊಮ್ಮಾಯಿ ನುಡಿದರು.
ಈ ಸರ್ಕಾರ ಸಂಪೂರ್ಣವಾಗಿ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಎಲ್ಲರೂ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ, ಇದಕ್ಕಾಗಿ ಸರ್ಕಾರದಲ್ಲಿ ಪೈಪೋಟಿ ನಡೆತಿದೆ. ಮೊನ್ನೆ ನಡೆದ ಸಭೆ ವರ್ಗಾವಣೆಯ ಪೈಪೋಟಿ, ಭ್ರಷ್ಟಾಚಾರದ ಪೈಪೋಟಿ ಅಷ್ಟೇ. ವರ್ಗಾವಣೆ ದಂಧೆಯಲ್ಲಿ ಬಾರ್ಗೆನಿಂಗ್ ನಡಿತಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಲೋಕಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿದೆ. ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದೇವೆ, ಜಿಲ್ಲಾವಾರ ಸಭೆ ಮಾಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಆದಷ್ಟು ಬೇಗ ಆಗಲಿದೆ ಎಂದು ಹೇಳಿದರು.
ಅಧಿಕಾರಿಗಳ ಮೇಲೆ ಕ್ರಮ ಇಲ್ಲಾದರೆ ಜನರೆ ದಂಗೆ ಎಳುತ್ತಾರೆ :
ಬೆಳಗಾವಿಯಲ್ಲಿ ವಿಕಲಾಂಗನ ಮೇಲೆ ಪೊಲೀಸರ ಮಾರಣಾಂತಿಕ ಹಲ್ಲೆ ಪ್ರಕರಣ ವಿಷಯವಾಗಿ ಮಾತನಾಡಿದ ಅವರು, ಸಮಾಜಘಾತುಕ ಶಕ್ತಿಗಳು ಈಗ ನಿರ್ಭಯವಾಗಿ ಓಡಾಡುತ್ತಿದ್ದಾರೆ. ಸಮಾಜ ಘಾತುಕ ಶಕ್ತಿಗಳಿಗೆ ಈ ಸರ್ಕಾರವೇ ಬೆಂಬಲ ನೀಡುತ್ತಿದೆ. ಭಯ ಹೋಗಿದೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ.
ಸಾಮಾನ್ಯ ಜನರ ಮೇಲೆ ಹಲ್ಲೆ, ಹೆಣ್ಣುಮಕ್ಕಳ ಮೇಲೆ ಹಲ್ಲೆ ಆಗುತ್ತಿದೆ. ಪೊಲೀಸ ಅಧಿಕಾರಿಗಳ ಕೊಲೆ ಆಗುತ್ತದೆ, ಮತ್ತೊಂದೆಡೆ ಪೊಲೀಸರಿಂದ ಅಮಾಯಕರ ಮೇಲೆ ಹಲ್ಲೆ ಆಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೂಡಲೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಜನರೇ ಸರ್ಕಾರದ ವಿರುದ್ಧ ದಂಧೆ ಎಳುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.