ಅಂತು ಕಳಸಾ, ಭಂಡೂರಿ ಯೋಜನೆ ಭೂಸ್ವಾಧಿನಕ್ಕೆ ಸರಕಾರದ ಸಿದ್ದತೆ : ಹೊರಬಂತು ಅಧಿಸೂಚನೆ
ಪಾರೇಶ ಭೋಸಲೆ
ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆಯಾಗಿರುವ ಕಳಸಾ, ಭಂಡೂರಾ ನಾಲಾ ತಿರುವು ಯೋಜನೆಯಡಿಯಲ್ಲಿ ಹುಬ್ಬಳ್ಳಿ, ಧಾರವಾಡ ಮತ್ತು ಕುಂದಗೋಳ ಪಟ್ಟಣ ಹಾಗೂ ಮಾರ್ಗ ಮಧ್ಯ ಬರುವ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಭೂಸ್ವಾಧಿನಕ್ಕಾಗಿ ಸರಕಾರ ಮುಂದಾಗಿದ್ದು, ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ.
ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಭಾಗದ ಮಹತ್ವದ ಯೋಜನೆ ಆಗಿರುವ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಜನ್ಮ ತಾಳಿ ಹುಬ್ಬಳ್ಳಿ ಧಾರವಾಡ, ಗದಗ ಬಾಗಲಕೋಟೆ ಸೇರಿದಂತೆ ಅನೇಕ ಜಿಲ್ಲೆಗಳಿಗೆ ವರದಾನವಾಗಲಿರುವ ಈ ಕಳಸಾ ಹಾಗೂ ಭಂಡೂರಿ ನಾಲಾ ಯೋಜನೆಯನ್ನು ಸರಕಾರ ಜನರಿಗೆ ತಲುಪಿಸಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ಭೂಸ್ವಾಧಿನಕ್ಕಾಗಿ ಪ್ರಕ್ರಿಯೆಯನ್ನು ಆರಂಭಿಸಿದೆ.
ಸರಕಾರ ಹೊರಡಿಸಿರುವ ಭೂಸ್ವಾಧಿನ ಅಧಿಸೂಚನೆ ಪ್ರಕಾರ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅಸೋಗಾ ಗ್ರಾಮದಲ್ಲಿ 2 ಎಕರೆ 38 ಗುಂಟೆ ಜಮಿನು ಹಾಗೂ ಕರಂಬಳ ಗ್ರಾಮದಲ್ಲಿ 15 ಗುಂಟೆ ಮತ್ತು ಶೆಡೆಗಾಳಿ ಗ್ರಾಮದಲ್ಲಿ 14 ಗುಂಟೆ ಮತ್ತು ರೊಮೇವಾಡಿ ಗ್ರಾಮದಲ್ಲಿ 6 ಎಕರೆ ಹೀಗೆ 9 ಎಕರೆ 27 ಗುಂಟೆ ಜಮೀನನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಭೂಸ್ವಾಧಿನ ಮಾಡಿಕೊಳ್ಳಲು ಸರಕಾರ ಅಧಿಸೂಚನೆ ಹೊರಡಿಸಿದೆ.
ಅಂತ ಇಂತು ಸರಕಾರ ತಡವಾಗಿಯಾದರೂ ಕಳಸಾ, ಭಂಢೂರಿ ಯೋಜನೆಯನ್ನು ಕಾರ್ಯಗತ ಮಾಡಲು ಮುಂದಾಗಿರುವದು ಈ ಭಾಗದ ನಾಗರಿಕರಿಗೆ ಸಂತಸ ತಂದಿದೆ.
ಯಾವದೇ ಕಾರಣಕ್ಕೆ ಯೋಜನೆ ಕೈ ಬಿಡಬಾರದು : ಚಂದರಗಿ
ಈ ಯೋಜನೆಯ ಭೂಸ್ವಾಧಿನದ ಕಾರ್ಯವನ್ನು ಸರಕಾರ ಯಾವುದೇ ಕಾರಣಕ್ಕೆ ಕೈಬಿಡಬಾರದು. ಒಂದು ವೇಳೆ ಭೂಮಿ ಕಳೆದುಕೊಳ್ಳುತ್ತಿರುವ ಜಮೀನುಮಾಲಿಕರಿಗೆ ಹೆಚ್ವಿನ ಪರಿಹಾರ ನೀಡುವ ಮೂಲಕ ಸರಕಾರ ಈ ಯೋಜನೆಯನ್ನು ಕಾರ್ಯಗತ ಮಾಡಬೇಕು ಎಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರು ಸರಕಾರ ವನ್ನು ಒತ್ತಾಯಿಸಿದ್ದಾರೆ.