ದಿನನಿತ್ಯದ ಉತ್ತಮ ಕೆಲಸಗಳು ಯೋಗದ ಭಾಗ: ಪ್ರತಿಮಾ ಗಿರಿಧರ್
ಬಳ್ಳಾರಿ 21: ಯೋಗಾಸಗಳು, ಧ್ಯಾನ, ಪ್ರಾಣಾಯಾಮಗಳಷ್ಟೆ ಯೋಗವಲ್ಲ, ನಾವು ದಿನನಿತ್ಯ ಮಾಡುವ ಮತ್ತು ಅಳವಡಿಸಿಕೊಳ್ಳುವ ಉತ್ತಮ ಕೆಲಸಗಳು ಸಹ ಯೋಗದ ಭಾಗವಾಗಿವೆ ಎಂದು ಇಂಡಿಯಾ ಯೋಗ ಸಂಸ್ಥೆ ಮೈಸೂರಿನ ಮುಖ್ಯ ಯೋಗ ತರಬೇತುದಾರರಾದ ಪ್ರತಿಮಾ ಗಿರಿಧರ್ ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಆನ್ಲೈನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ವೇದ ಮತ್ತು ಭಗವದ್ಗೀತೆಯಲ್ಲಿ ಯೋಗದ ಉಲ್ಲೇಖವಿದೆ. ಯೋಗದಲ್ಲಿ ಆಧ್ಯಾತ್ಮಿಕ ಮತ್ತು ಪ್ರಾಯೋಗಿಕ ಎಂಬ ಎರಡು ವಿಧಗಳಿವೆ. ಆಧ್ಯಾತ್ಮಿಕತೆಯಲ್ಲಿ ಜ್ಞಾನ, ಭಕ್ತಿ, ಧ್ಯಾನ, ಹಟ, ಸಂಯಮ ಯೋಗ ಮಾದರಿಗಳಿವೆ. ಪ್ರಾಯೋಗಿಕದಲ್ಲಿ ಅಷ್ಟಾಂಗ ಯೋಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳು ಒಳಗೊಂಡಿವೆ.
ಈಗ ಉತ್ಪತ್ತಿಯಾಗಿರುವ ಕೋವಿಡ್-19 ರ ಸ್ಥಿತಿಯಲ್ಲಿ ಸಮಾಜ ಯೋಗ ಮತ್ತು ಯೋಗ ಮುದ್ರಿಕೆಗಳ ಮೂಲಕ ರೋಗದ ವಿರುದ್ಧ ಹೋರಾಡಲು ಹಾಗೂ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗವು ಪರ್ಯಾಯ ಮಾರ್ಗವಾಗಿದೆ. ಸ್ವ ಪ್ರಗತಿ ಜೊತೆಯಲ್ಲಿ ಮತ್ತೊಬ್ಬರ ಪ್ರಗತಿಗೆ ಶ್ರಮಿಸಲು ಯೋಗವು ದಾರೀದೀಪವಾಗಿದೆ ಎಂದು ತಿಳಿಸಿದರು.
ಕೋವಿಡ್ ವಿರುದ್ಧ ಹೋರಾಡಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾಣಾಯಾಮದ ಕೆಲವು ತಂತ್ರಗಳನ್ನು ಪ್ರಾಯೋಗಿಕವಾಗಿ ವಿವರಿಸಿದರು.
ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ನಮ್ಮ ದೇಶವು ವಿಶ್ವಗುರು ಪಟ್ಟವನ್ನು ಮರಳಿ ಪಡೆದಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಶಶಿಕಾಂತ್ ಉಡಿಕೇರಿ ಹೇಳಿದರು.
ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಶಶಿಕಾಂತ್ ಕೆಲ್ಲೂರ್ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿ ಉಪನ್ಯಾಸಕರುಗಳಾದ ಸಿದ್ಧಾಚಾರಿ ಸ್ವಾಗತಿಸಿದರು ಮತ್ತು ಮಲ್ಲಿಕಾರ್ಜುನ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಡೀನರು, ಮುಖ್ಯಸ್ಥರು, ಸಂಯೋಜಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವು ಯೂಟ್ಯೂಬ್ ಚಾನಲ್ ಮೂಲಕ ನೇರ ಪ್ರಸಾರಗೊಂಡಿದ್ದನ್ನು 500ಕ್ಕೂ ಹೆಚ್ಚು ಜನ ವೀಕ್ಷಿಸಿ ಪ್ರಯೋಜನ ಪಡೆದುಕೊಂಡರು.