ದೇವಿ ಪುರಾಣ ಮಹಿಮೆ
ಭಾರತೀಯರು ಅದರಲ್ಲಿ ಹಿಂದುಗಳು, ಹಬ್ಬ ಹರಿದಿನಗಳನ್ನು ಆಚರಿಸುವಲ್ಲಿ ಮುಂದಾಳುಗಳು. ಹುಣ್ಣಿಮೆ, ಅಮಾವಾಸ್ಯೆಗೊಮ್ಮೆ, ಪ್ರತಿ ಹದಿನೈದು ದಿನಗಳಿಗೊಮ್ಮೆ ವಿಶೇಷವಾದ ಪೂಜೆ, ಆಚರಣೆ, ಸಂಪ್ರದಾಯಗಳನ್ನು ಮಾಡುತ್ತಾ ಬಂದವರಾಗಿದ್ದಾರೆ. ಆ ನಿಮಿತ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ, ಮನದಲ್ಲಿ ದೇವರ ಧ್ಯಾನ, ಆರಾಧನೆ, ಪ್ರಾರ್ಥನೆ ಮುಂತಾದವುಗಳು ವಿಶಿಷ್ಟವಾದ ರೀತಿಯಲ್ಲಿ ಇರುತ್ತವೆ.
ಈ ಮಧ್ಯೆ ಅದರಂತೆ ಇನ್ನೂ ಕೆಲವು ಹಬ್ಬಗಳು ಬರುತ್ತವೆ. ಇವು ಸಾರ್ವತ್ರಿಕವಾದ ಹಬ್ಬಾಚರಣೆಗಳಾಗಿರುತ್ತವೆ. ಅವುಗಳಲ್ಲಿ ಮಹಾನವಮಿ ಹಬ್ಬ ಅಥವಾ ದಸರಾ ಹಬ್ಬವೂ ಒಂದಾಗಿದೆ. ಈ ಹಬ್ಬದ ವೈಶಿಷ್ಠ್ಯತೆಯೆಂದರೆ ನವರಾತ್ರಿ ಹಬ್ಬ, ಒಂಭತ್ತು ದಿನಗಳಲ್ಲಿ ನವವಿಧವಾದ ಭಕ್ತಿ, ಶ್ರದ್ಧೆಗಳಿಂದ ಅಂತರಂಗ ಬಹಿರಂಗ ಶುದ್ಧಿಗಾಗಿ ಶ್ರೀದೇವಿಯ ಆರಾಧನೆ ಮಾಡುವುದು. ವೈಯಕ್ತಿಕವಾಗಿ ಮತ್ತು ಸಾರ್ವತ್ರಿಕವಾಗಿ ದೇವಿ ಮಹಾತ್ಮೆಯ ಪುರಾಣ ಪಠಣ ಮಾಡುವವರಿದ್ದಾರೆ. ಈ ಪುರಾಣದ ವಿಶೇಷತೆಯೇ ಬೇರೆ. ಎಲ್ಲಾ ಪುರಾಣಗಳಲ್ಲಿ ಜನನ-ಮರಣದಿಂದ ಮುಕ್ತಾಯವಾದರೆ, ಇಲ್ಲಿ ಜನನ-ಮರಣಗಳ ಶಬ್ದಗಳೇ ಇಲ್ಲ. ಕವಿ ಚಾಮರಸ ಹೇಳುವ ಹಾಗೆ ಇದು ಸತ್ತವರ ಕಥೆಯಲ್ಲ. ಕರ್ಮದ ಕುತ್ತದಲಿ ಕುದಿಕುದಿದು ಮತ್ತಮತಿಗಳ ಘೋಷ್ಠಿಯಲ್ಲ. ಪುಂಡರಾಲಿಪ ಕಥೆಯಲ್ಲ ಎನ್ನುವ ಹಾಗೆ ಈ ಕಥೆಯಿದೆ. ಸಾಕ್ಷಾತ್ ಶಾಂಭವಿಯ ಅವತಾರ ಮಹಿಮೆಯನ್ನು ಅಂತಃಕರಣ ಪೂರ್ವಕ ಶ್ರೀಗುರುವಿನ ಆಶೀರ್ವಾದದಿಂದ ಏಕನಿಷ್ಠೆಯಿಂದ ಸದಾ ದೇವಿ ಸ್ಮರಣೆ ಮಾಡುವುದರಲ್ಲೊಂದು ಶಕ್ತಿ ಇದೆ.
ಈ ಪುರಾಣದಲ್ಲಿ 18 ಅಧ್ಯಾಯಗಳಿವೆ. ಇದರಲ್ಲಿ ಬರುವ ವಿಷಯ ನಮ್ಮ ದೇಹವನ್ನೇ ಕುರಿತು ಮಾಡುವ ಆತ್ಮಾವಲೋಕನ ಅತ್ಯದ್ಭುತವಾದುದು. ಇದರಂತೆ ಮತ್ತಾವ ಪುರಾಣ, ಪುಣ್ಯಕಥೆಗಳಲ್ಲೂ ಕಂಡುಬರುವುದಿಲ್ಲ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಅರ್ಜುನನನ್ನು ಕುರಿತು ಮಾಡುವ ಉಪದೇಶವಾದರೂ ಸಹ ಅದು ಲೌಕಿಕ ಜನರ ಸ್ವಭಾವಗಳಿಗೆ ಸಂಬಂಧಿಸಿದೆ. ಆದರೆ ದೇವಿ ಪುರಾಣವು ಅಲೌಕಿಕವಾದ ಪಾರಮಾರ್ಥ ಬೋಧನೆಯಿಂದ ಹರಿಷಡ್ವರ್ಗಗಳಾದ ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರಾ್ಯದಿಗಳನ್ನು ಪ್ರಚುರಪಡಿಸುವುದಾಗಿದೆ. ಇದರಿಂದ ಕೋಪತಾಪಗಳನ್ನು ಗೆಲ್ಲುವುದು ಹೇಗೆ? ಅಹಂಕಾರ ಒಳಿತಲ್ಲವೆಂಬುದನ್ನು ನಮ್ಮ ಅನೇಕ ರಾಕ್ಷಸರ ಉದಾಹರಣೆಗಳ ಮುಖಾಂತರ ಮನುಷ್ಯನ ಜೀವನದ ನಿಜಸ್ವರೂಪ, ಪರಮ ಜ್ಞಾನವನ್ನು ಅರಿವು-ಮರೆವುಗಳ ಬೇಧಗಳನ್ನು ಈ ಪುರಾಣದಲ್ಲಿ ಲಾಕ್ಷಣಿಕವಾಗಿ ತಿಳಿಸುವ ಮಾರ್ಮಿಕ ಶಬ್ದಗಳು ಎಂತವರನ್ನೂ ಸಹ ಮಂತ್ರಮುಗ್ಧರನ್ನಾಗಿ ವಿಸ್ಮಯಗೊಳಿಸುತ್ತದೆ. ಸತ್ವ, ರಜ, ತಮೋಗುಣಗಳ ತ್ರಿಮಲಗಳ ನಿವಾರಣೆ ಹೇಗೆಂಬುದನ್ನು ವಿವರಿಸುತ್ತದೆ.
“ಯಥಾ ಬ್ರಹ್ಮಾಂಡ, ತಥಾ ಪಿಂಡಾಂಡ”
ಎಂಬಂತೆ ತೋರುವ ಕೈಗನ್ನಡಿ ಇದಾಗಿದೆ. ಈಶ್ವರ, ಜೀವ ಜಗತ್ತಿನ ಜ್ಞಾನ ಹಾಗೂ ಬ್ರಹ್ಮ, ವಿಷ್ಣು, ಮಹೇಶ್ವರಾದಿಯಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಕಥಾರೂಪದಿಂದ ಸುಲಿದ ಬಾಳೆಹಣ್ಣಿನಂತೆ ಆತ್ಮಜ್ಞಾನ ಬಯಸುವ ಯತಿಪುಂಗವರಿಗೆ ಲೌಕಿಕರು ತಮ್ಮ ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಸಿಕೊಳ್ಳಬೇಕೆಂಬುವವರಿಗೆ ಇದು ಕಾಮಧೇನು ಕಲ್ಪವೃಕ್ಷವಾಗಿದೆ ಹಾಗೂ ಕೊನೆಯದಾದ ಸಪ್ತ ಜನ್ಮಗಳ ಪಾಪನಾಶ ಮಾಡುವ ಸಾಮರ್ಥ್ಯವನ್ನೂ ಸಹ ದೇವಿ ಹೊಂದಿದ್ದಾಳೆ ಎಂಬುದನ್ನು ಈ ದೇವಿ ಮಹಾತ್ಮೆಯಲ್ಲಿ ಅಂತರ್ಗತವಾಗಿದೆ.
ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡಿರಿ.
ದೇವಿಯು ರಾಕ್ಷಸರ ಸಂಹಾರ ಸಂದರ್ಭದಲ್ಲಿ ಕಡಿ, ಬಡಿ, ಹೊಡಿ ಎನ್ನುವುದನ್ನೆ ಇಲ್ಲಿ ಹೆಚ್ಚಾಗಿ ಕಾಣುತ್ತೇವೆ. ಇದರಿಂದ “ದುಷ್ಟ ಶಿಕ್ಷಕಿ, ಶಿಷ್ಟ ಪರಿಪಾಲಕಿ” ಎನ್ನುವುದನ್ನು ನಾವು ಮನಗಾಣಬೇಕಾಗಿದೆ.
ಎಂಟನೇ ಅಧ್ಯಾಯದಲ್ಲಿ ಮಹಿಷಾಸುರ ಸಂಹಾರ ಮಾಡುವಾಗ ದೇವಿಗೆ ಪ್ರೋತ್ಸಾಹಿಸಬೇಕೆಂದು ದೇವತೆಗಳು ಮಧುಪಾನ ಮಾಡು ಪರಾಂಬೆ, ಈ ನಿಷಾಟನದೇನು ಎಂದು ಹೇಳುವಾಗ ಬಹುತೇಕ ಜನರೆಲ್ಲ ಮಧುಪಾನ ಎಂದರೆ ಶೆರೆ ಎಂದು ಭಾವಿಸುವುದು ತಪ್ಪು. ಅಷ್ಟಾಂಗ ಸಾಧನೆಯಿಂದ ಸಾಧಕನು ತನ್ನ ಹೃದಯ ಕಮಲದಲಿ ಶಿವ-ಜೀವರ ಸಾಮರಸ್ಯದಿಂದ ಆನಂದವನ್ನು ಪಡೆದು ತನ್ನ ಶಿರಸ್ಸಿನ ಪಶ್ಚಿಮದ ಸಹಸ್ರದಳ ಕಮಲದಿಂದ ಅಮೃತ ಸವಿಯುವುದನ್ನೇ ಈ ಅನುಭವ ಜ್ಞಾನವೇ ಮಧು ಎಂದೆನಿಸುವುದು. ಇದನ್ನೇ ಪರಮಾನಂದದ ಅಮೃತವೆಂದು ಕರೆಯುವರು ಅಥವಾ ಮಧುಪಾನ ಎನ್ನುವರು. ಇಲ್ಲಿ ಕಾಣುವುದೆ ಬೇರೆ, ಅದು ಇರುವುದೆ ಬೇರೆ ಎನ್ನುವುದನ್ನು ನಾವಿಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ. ನಮ್ಮ ದುರ್ಗುಣಗಳನ್ನು ದೂರ ಮಾಡಿ, ಸಂಸಾರ ತಾಪತ್ರಯಗಳನ್ನು ನಿವಾರಿಸಿ ಮೋಕ್ಷ ಮಾರ್ಗ ತೋರುವುದೇ ದೇವಿಯ ಮಹತ್ವವಾದ ಕಾರ್ಯವೈಖರಿಯಾಗಿದೆ. ಈ ಗ್ರಂಥವನ್ನು ಓದಿ ತಿಳಿದುಕೊಂಡು ಮಾಡಿ ಕಲಿಯಬೇಕಾಗಿರುವುದು ನಮ್ಮ ಜೀವನದಲ್ಲಿ ಸಾಕಷ್ಟಿದೆ.
ಈ ನವರಾತ್ರಿಯ ಮಂಗಲ ಸಮಯದಲ್ಲಿ ಬನ್ನಿಗಿಡವನ್ನು ಪೂಜಿಸಿ, ಬನ್ನಿ ಮುಡಿದು ನಮ್ಮೆಲ್ಲರ ಬದುಕು ಬಂಗಾರದಂತೆ ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂಬ ಸಂಕೇತವೇ ನವರಾತ್ರಿ ಅಥವಾ ದಸರಾ ಹಬ್ಬವಾಗಿದೆ. ಈ ದೇವಿ ಮಹಾತ್ಮೆಯನ್ನು ಒಟ್ಟಾರೆ ಹೇಳುವುದಾದರೆ,
“ದೇವಿ ಎಮ್ಮ ಮನವನು
ನಿನ್ನ ಧ್ಯಾನದಲ್ಲಿರಿಸು
ಬದುಕಿನಲ್ಲಿ ಬರುವ
ಸಂಕಷ್ಟಗಳನ್ನು ಪರಿಹರಿಸು
ಸರ್ವ ಸಂಕಲ್ಪ ಕಾರ್ಯಗಳನು
ನೆರವೇರಿಸು,
ಸದಾ ಸದ್ಬುದ್ಧಿ, ಸದಾಚಾರಗಳನು
ನಮ್ಮೊಳಗಿರಿಸು
ಸಕಲ ಸದ್ಭಕ್ತರನು ಉದ್ಧರಿಸು
ಬೊಳೋಡಿ ಬಸವೇಶನ
ಪಾದಪದ್ಮಂಗಳಿಗೆ ಶಿರಸಾ ನಮಿಸು”
ಎಂಬಂತೆ ಶ್ರೀದೇವಿಯನ್ನು ಭಕ್ತಿ, ಜ್ಞಾನ, ವಿರತಿಯಿಂದ ಪ್ರಾರ್ಥಿಸಿದವರಿಗೆ ಇದರಿಂದ ಜೀವನ್ಮುಕ್ತಿ ಹೊಂದುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಸಚ್ಛಿದಾನಂದ ಸ್ವರೂಪಳಾದ ಕರುಣಾಮಯಿ ದೇವಿಗೆ ಅನಂತ ನಮನಗಳು.
ಽಽ ಸಕಲ ಸನ್ಮಂಗಲಾನಿ ಭವಂತು ಽಽ
ಽಽ ಸರ್ವೇ ಜನಾಃ ಸುಖಿನೋ ಭವಂತುಃ ಽಽ
ಽಽ ಓಂ ಶಾಂತಿಃ, ಶಾಂತಿಃ, ಶಾಂತಿಃ, ಶಾಂತಿಃ ಽಽ
- ಪೂಜ್ಯ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು,
ಬೃಹನ್ಮಠ, ಹೆಬ್ಬಾಳ
- * * * -