ಬಳ್ಳಾರಿ

345 ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟಿಸುತ್ತಿರುವವರ ಕಡೆ ತುರ್ತಾಗಿ ಗಮನ ನೀಡಿ: ವೈ.ಎಂ.ಸತೀಶ್

345 ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟಿಸುತ್ತಿರುವವರ ಕಡೆ ತುರ್ತಾಗಿ ಗಮನ ನೀಡಿ: ವೈ.ಎಂ.ಸತೀಶ್

ಬಳ್ಳಾರಿ,ಡಿ.05: ತಾಲೂಕಿನ ಸಿರಿವಾರ-ಚಾಗನೂರು ಗ್ರಾಮದ 900.96 ಎಕರೆ ಭೂ ಪ್ರದೇಶದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಡಿಪಿಆರ್ (ಡಿಟೇಲ್ಡ್‌ ಪ್ರಾಜೆಕ್ಟ್‌ ರಿಪೋರ್ಟ್‌) ಸಿದ್ದಪಡಿಸುವ ಪ್ರಸ್ತಾವನೆ ಹಣಕಾಸು ಇಲಾಖೆಯಲ್ಲಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂದು ಎಂ.ಬಿ.ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ. 

ಬಳ್ಳಾರಿ-ವಿಜಯನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಎಂಎಲ್‌ಸಿ ವೈ.ಎಂ. ಸತೀಶ್ ಅವರು ಮೇಲ್ಮನೆಯಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಸಚಿವ ಎಂ.ಬಿ.ಪಾಟೀಲ್ ಅವರ ಪರವಾಗಿ ಉತ್ತರ ನೀಡಿದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪುರ ಅವರು, ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಸ್ವಾಧೀನ ಮಾಡಿಕೊಂಡಿರುವ 806.34 ಎಕರೆ ಭೂಮಿಯನ್ನು ಬಳ್ಳಾರಿ ತಹಸೀಲ್ದಾರರಿಗೆ ಹಸ್ತಾಂತರ ಮಾಡಿ, ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ವಿಮಾನ ನಿಲ್ದಾಣದ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಡಿಪಿಆರ್ (ಡಿಟೇಲ್ಡ್‌ ಪ್ರಾಜೆಕ್ಟ್‌ ರಿಪೋರ್ಟ್‌) ಸಿದ್ಧಪಡಿಸುವ ಪ್ರಸ್ತಾವನೆಯು ಹಣಕಾಸು ಇಲಾಖೆಯಿಂದ ಶೀಘ್ರದಲ್ಲಿಯೇ ಅನುಮೋದನೆ ಸಿಗಲಿದೆ ಎಂದರು. 

ಇದಕ್ಕೆ ವೈ.ಎಂ. ಸತೀಶ್ ಅವರು ಮಾತನಾಡಿ, ಹರಗಿನಡೋಣಿ - ಕುಡತಿನಿ ಮಧ್ಯದಲ್ಲಿದ್ದ ಹಳೆಯದಾದ ಬಂಡಿಜಾಡು ರಸ್ತೆಯನ್ನು ಅರ್ಸೆಲ್ಲರ್ ಮಿತ್ತಲ್‌ನ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕಂಪನಿಯ ವಶಕ್ಕೆ ನೀಡಿರುವ ಕಾರಣ ಕಂಪನಿಯು ಈ ರಸ್ತೆಯನ್ನು ಮುಚ್ಚಿದೆ. ಕಂಪನಿಯು ಈ ರಸ್ತೆಯನ್ನು ಮುಚ್ಚಿರುವ ಕಾರಣ ಮೂಲಕ ವಿದ್ಯಾರ್ಥಿಗಳು, ಕೆಪಿಟಿಸಿಎಲ್ ಹಾಗೂ ಇನ್ನಿತರೆ ಕೈಗಾರಿಕೆಗಳಿಗೆ ಕೆಲಸಕ್ಕೆ ಹೋಗುವವರು, ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುವುದರ ಜೊತೆಯಲ್ಲಿ 30 ಕಿಮೀ ಸುತ್ತ ತಿರುಗಿ ಕುಡತಿನಿ ತಲುಪಬೇಕಾಗಿದೆ. ಮುಚ್ಚಿರುವ ರಸ್ತೆಯನ್ನು ತೆಗೆದು ಹಗರಿನಡೋಣಿಯ ಗ್ರಾಮಸ್ಥರು-ವಿದ್ಯಾರ್ಥಿಗಳು; ಕಾರ್ಮಿಕರು ನಿತ್ಯ ತಿರುಗಾಡಲು ಅವಕಾಶ ಕಲ್ಪಿಸಬೇಕು ಎಂದು ಸದನಕ್ಕೆ ಕೋರಿದರು. 

ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪುರ ಅವರು ಮಾತನಾಡಿ, ಹರಗಿನಡೋಣಿ ಗ್ರಾಮಸ್ಥರು ಕುಡತಿನಿ ಮಧ್ಯೆ ತಿರುಗಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸದನಕ್ಕೆ ಉತ್ತರಿಸಿದರು. 

ಉತ್ತಮ ಗಾಲ್ವಾ, ಅರ್ಸೆಲರ್ ಮಿತ್ತಲ್ ಪ್ರಾರಂಭವಾಗದ ಕಾರಣ ಭೂ ನಿರಾಶ್ರಿತ ರೈತರು ಉದ್ಯೋಗ, ಹೆಚ್ಚುವರಿ ಪರಿಹಾರ, ಇನ್ನಿತರೆ ಸೌಲಭ್ಯಗಳಿಗಾಗಿ ಆಗ್ರಹಿಸಿ 345 ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಇವರ ಬೇಡಿಕೆಗಳ ಈಡೇರಿಕೆಗೆ ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದು ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಕೇಳಿದ ಪ್ರಶ್ನೆಗೆ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪುರ ಅವರು ಪ್ರತಿಕ್ರಿಯಿಸಿ, ಇಂಟಿಗ್ರೇಟೆಡ್ ಸ್ಟೀಲ್‌ಪ್ಲಾಂಟ್ ನಿರ್ಮಾಣ ಮಾಡಲು ಉತ್ತಮಗಾಲ್ವಾ ಫೆರೋಸ್ ಲಿಮಿಟೆಡ್‌ಗೆ 4877.81 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಕೈಗಾರಿಕೆ ನಿರ್ಮಾಣಕ್ಕಾಗಿ ಮಿನಿಸ್ಟ್ರಿ ಆಫ್ ಎನ್ವಿರಾಮ್ಮೆಂಟ್ ಅಂಡ್ ಫಾರೆಸ್ಟ್‌ (ಎಂಒಇಎಫ್)ನ ಎನ್ವಿರಾಮ್ಮೆಂಟ್ ಕ್ಲಿಯರೆನ್ಸ್‌ನ ಅನುಮತಿಗಾಗಿ ಕಂಪನಿಯು ಅರ್ಜಿ ಸಲ್ಲಿಸಿದ್ದು, ಅನುಮತಿ ಸಿಕ್ಕಿಲ್ಲ. ಭೂ ಸ್ವಾಧೀನದ ಪರಿಹಾರ ಹೆಚ್ಚಳಕ್ಕಾಗಿ ಕೆಲ ರೈತರು ಹೂಡಿರುವ ದಾವೆ ನ್ಯಾಯಾಲಯದಲ್ಲಿದೆ. ಕಾರಣ ಕಂಪನಿಯು ಈ ಯೋಜನೆಯ ಅನುಷ್ಠಾನಕ್ಕಾಗಿ ಹೆಚ್ಚುವರಿಯಾಗಿ 6 ವರ್ಷಗಳ ಕಾಲಾವಕಾಶವನ್ನು ಕೋರಿದೆ. ಈ ಕುರಿತು ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಸೂಕ್ತ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ. ಅರ್ಸೆಲ್ಲರ್ ಮಿತ್ತಲ್‌ನ ವಿಷಯ ಸುಪ್ರೀಂಕೋರ್ಟ್‌ನಲ್ಲಿದೆ ಎಂದು ಉತ್ತರಿಸಿದರು. 

------ 

ತಾಲೂಕಿನ ವಿವಿಧೆಡೆ ಸಂಚರಿಸಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ 

ಬಳ್ಳಾರಿ,ಡಿ.05: ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಮತ್ತು ಅವುಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಸೋಮವಾರ ಬಳ್ಳಾರಿ ತಾಲ್ಲೂಕಿನ ಹಗರಿ, ಪರಮದೇವನಹಳ್ಳಿ ಮತ್ತು ಅಮರಾಪುರ ಗ್ರಾಮಗಳಲ್ಲಿ ಸಂಚರಿಸಿತು. 

ಕೃಷಿ ಮತ್ತು ಹೈನುಗಾರಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ಗಳ ಮೂಲಕ ಸಾಲ ಪಡೆದುಕೊಳ್ಳಿ, ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ ಕೇಂದ್ರ ಸರ್ಕಾರವು ಶೇ.4ರಷ್ಟು ಬಡ್ಡಿ ಮರುಪಾವತಿ ಮಾಡಲಿದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೋಮನಗೌಡ ಐನಾಪುರ ಅವರು, ಕೆನರಾ ಬ್ಯಾಂಕ್ ಹಗರಿ ಶಾಖೆ ವತಿಯಿಂದ ಪಿಡಿ ಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಎಲ್ಲಾ ರೈತರು ಮತ್ತು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಸಾಮಾಜಿಕ ಭದ್ರತಾ ಯೋಜನೆಗಳಡಿ ನಿರ್ದಿಷ್ಟ ಉದ್ದೇಶಗಳಿಗಾಗಿ ಪಡೆಯುವ ಸಾಲವನ್ನು ಮತ್ತು ಪಡೆದ ಸಾಲವನ್ನು ಮರುಪಾವತಿ ಮಾಡುವ ಮೂಲಕ ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು. 

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಆಯುಷ್ಮಾನ್ ಭವ ಆರೋಗ್ಯ ಯೋಜನೆಯಡಿ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದರು. ಹಗರಿಯ ಕೃಷಿ ಸಂಶೋಧನೆ ಕೇಂದ್ರದ ಅಧಿಕಾರಿಗಳು ಸುಧಾರಿತ ತಳಿ ಬೆಳೆಗಳ ಬಗ್ಗೆ ಮಾಹಿತಿ ಒದಗಿಸಿದರು.  

ಜಿ.ಪಂ.ಅಧ್ಯಕ್ಷೆ ಲಕ್ಷ್ಮೀದೇವಿ, ಹಗರಿ ಕೆನರಾ ಬ್ಯಾಂಕ್ ಶಾಖಾಧಿಕಾರಿ ರವಿ ರಾಥೋಡ್, ಕೆವಿಕೆ ವಿಜ್ಞಾನಿಗಳಾದ ಗೋವಿಂದಪ್ಪ, ಹನುಮಂತಪ್ಪ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. 

ಎಫ್‌ಎಲ್‌ಸಿ ದಿನೇಶ್‌.ಜಿ ಅವರು ಪ್ರತಿಜ್ಞೆ ಬೋಧಿಸಿದರು. ಆರ್‌ಸಿಎಫ್‌ನಿಂದ ಡೋನ್ ಪ್ರದರ್ಶನವನ್ನು ಕೈಗೊಳ್ಳಲಾಯಿತು. ಕೇಂದ್ರ ಸರ್ಕಾರದ ಮತ್ತು ಕೈಗೊಂಡ ಕಾರ್ಯಕ್ರಮ, ಯೋಜನೆಗಳ ಕುರಿತು ಡಿಜಿಟಲ್ ಪರದೆ ಮೂಲಕ ಪ್ರದರ್ಶಿಸಲಾಯಿತು. 

ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲ ಮತ್ತು ಪರಿಕರಗಳನ್ನು ವಿತರಿಸಲಾಯಿತು. 

----- 

ಡಿ.13ರಂದು ಪಿಂಚಣಿ ಅದಾಲತ್ 

ಬಳ್ಳಾರಿ,ಡಿ.05(ಕರ್ನಾಟಕ ವಾರ್ತೆ): 

ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯಿಂದ ಪಿಂಚಣಿದಾರರ ಕುಂದುಕೊರತೆಗಳನ್ನು ನಿವಾರಿಸಲು ಡಿಸೆಂಬರ್ 13 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಬಳ್ಳಾರಿ ಪ್ರಾದೇಶಿಕ ಕಚೇರಿಯಲ್ಲಿ ಪಿಂಚಣಿ ಅದಾಲತ್ ಏರಿ​‍್ಡಸಲಾಗಿದೆ. 

ಬಳ್ಳಾರಿ, ಕೊಪ್ಪಳ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಪಿಂಚಣಿದಾರರು ತಮ್ಮ ಕುಂದುಕೊರತೆಗಳನ್ನು ಬಳ್ಳಾರಿಯ ಪ್ರಾದೇಶಿಕ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಇವರಿಗೆ ಪತ್ರ ಅಥವಾ ಇ-ಮೇಲ್ ಮೂಲಕ ತಮ್ಮ ಪಿ.ಪಿ.ಒ ಸಂಖ್ಯೆ ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ, ಕುಂದು ಕೊರತೆಯ ಸ್ವರೂಪ ಇತ್ಯಾದಿಗಳನ್ನು ಪತ್ರ ಮೂಲಕ ಬರೆದು ಡಿಸೆಂಬರ್ 10 ರೊಳಗೆ ಕಳುಹಿಸಬೇಕು. ಪತ್ರ, ಲಕೋಟೆಯ ಮೇಲೆ ಪಿಂಚಣಿ ಅದಾಲತ್ ಎಂದು ಬರೆಯಬೇಕು. 

ಹೆಚ್ಚಿನ ಮಾಹಿತಿಗಾಗಿ ದೂ.08392-226304 ಗೆ ಸಂಪರ್ಕಿಸಬಹುದು ಎಂದು ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತ ಕೆ.ವೆಂಕಟ ಸುಬ್ಬಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

----- 

ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್‌ನಲ್ಲಿ ತರಬೇತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ 

ಬಳ್ಳಾರಿ,ಡಿ.05(ಕರ್ನಾಟಕ ವಾರ್ತೆ): 

ಕಲಬುರಗಿಯ ಕರ್ನಾಟಕ ಇನ್‌ಸ್ಟಿಟ್ಯೂಟ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ತರಬೇತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 

ಈ ಸಂಸ್ಥೆಯ ಮೂಲಕ ಸಹಕಾರ ಸಂಘ ಸಂಸ್ಥೆ, ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ 6 ತಿಂಗಳು/180 ದಿನಗಳ ಅವಧಿಯ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿಯನ್ನು ನೀಡಲಾಗುತ್ತಿದ್ದು, 2024ರ ಜನವರಿಯಿಂದ ಪ್ರಾರಂಭವಾಗಲಿವೆ. ತರಬೇತಿ ಪಡೆಯಲಿಚ್ಛಿಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 

ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಸಹಕಾರ ಸಂಘ, ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ವೇತನ ಪಡೆಯುವ ನೌಕರರಾಗಿರಬೇಕು. ಖಾಸಗಿ ಅಭ್ಯರ್ಥಿಗಳಿಗೆ ನಿಯಮಿತವಾಗಿ ಅವಕಾಶವನ್ನು ಕಲ್ಪಿಸಲಾಗಿದೆ. 

ವಯೋಮಿತಿ 16 ವರ್ಷ ದಾಟಿದವರಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶೇ.18 ರಷ್ಟು ಸ್ಥಾನಗಳನ್ನು ತರಬೇತಿಗಾಗಿ ಮೀಸಲಿರಿಸಲಾಗಿರುತ್ತದೆ. ಕನಿಷ್ಟ ವಿದ್ಯಾರ್ಹತೆ ಎಸ್‌.ಎಸ್‌.ಎಲ್‌.ಸಿ ಅಥವಾ ತತ್ಸಮಾನ ಪರಿಕ್ಷೇಯಲ್ಲಿ ಉತ್ತೀರ್ಣರಾಗಿರಬೇಕು. ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ, ಸಹಕಾರಿ ಸಂಘಗಳಲ್ಲಿ ಒಂದು ವರ್ಷಕ್ಕಿಂತ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಸಹ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಈ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಮಾಹೆಯಾನ ರೂ.500 ಶಿಷ್ಯವೇತನ ನೀಡಲಾಗುವುದು. 

ನಿರುದ್ಯೋಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ “6 ತಿಂಗಳು/180 ದಿನಗಳ ವಿಶೇಷ “ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್‌” ತರಬೇತಿಯನ್ನು ಸಹ ನೀಡಲಾಗುವುದು. ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರವರ ಮೂಲಕ ಅಥವಾ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದು. 

ಅಭ್ಯರ್ಥಿಗಳು ಕನಿಷ್ಠ ಎಸ್‌.ಎಸ್‌.ಎಲ್‌.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ 16 ವರ್ಷಗಳಾಗಿರಬೇಕು. ಗರಿಷ್ಠ 30 ವರ್ಷಗಳು ಮೀರಿರಬಾರದು. ಈ ಅಭ್ಯರ್ಥಿಗಳಿಗೆ ಮಾಹೆಯಾನ ರೂ.600 ಶಿಷ್ಯವೇತನ ನೀಡಲಾಗುವುದು. 

ಡಿ.ಸಿ.ಎಂ ತರಬೇತಿಯ ಅರ್ಜಿ ನಮೂನೆ ಮತ್ತು ವಿವರಣಾ ಪುಸ್ತಕವನ್ನು ಕಲಬುರಗಿ ತರಬೇತಿ ಸಂಸ್ಥೆಯಿಂದ ಹಾಗೂ ತರಬೇತಿ ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಸಹಕಾರ ಯೂನಿಯನ್‌ಗಳಲ್ಲಿ (ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಹೊಸಪೇಟೆ) ಪಡೆಯಬಹುದು ಎಂದು ಕಲಬುರಗಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

*ಅರ್ಜಿ ಪಡೆಯುವ ಮತ್ತು ಕಳುಹಿಸುವ ವಿಳಾಸ:* 

ಪ್ರಾಂಶುಪಾಲರು, 

ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, 

ಆದರ್ಶನಗರ, ಪ್ರಗತಿ ಕಾಲೋನಿ, ಸೇಡಂ. ರಸ್ತೆ, ಕಲಬುರಗಿ-585105. 

ದೂ.08472-245340, ಮೊ.9916726886, ಮೊ.9742307153, ಮೊ.9113916753. 

------- 

ವಿಎಸ್‌ಕೆ ವಿವಿ: ತೃತೀಯ ಲಿಂಗಿ ಮತ್ತು ದೇವದಾಸಿ ಮಕ್ಕಳ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಶುಲ್ಕ ವಿನಾಯಿತಿ  

ಬಳ್ಳಾರಿ,ಡಿ.05(ಕರ್ನಾಟಕ ವಾರ್ತೆ): 

ಪ್ರಸ್ತಕ ಶೈಕ್ಷಣಿಕ ಸಾಲಿನಿಂದ ಸ್ನಾತಕ, ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಬಯಸುವ ತೃತೀಯ ಲಿಂಗಿ ಮತ್ತು ದೇವದಾಸಿ ಮಕ್ಕಳ ವಿದ್ಯಾರ್ಥಿಗಳಿಗೆ (ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ ಮಾತ್ರ) ಪ್ರವೇಶಾತಿಯ ಶುಲ್ಕದಿಂದ ವಿನಾಯಿತಿ ನೀಡಲಾಗುವುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್‌.ಎನ್‌ರುದ್ರೇಶ್ ಅವರು ತಿಳಿಸಿದ್ದಾರೆ. 

ಮಾನವೀಯ, ಸಾಮಾಜಿಕ, ನೈಸರ್ಗಿಕ ಸಾಮ್ಯತೆ ದೃಷ್ಟಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಸ್ನಾತಕ, ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಬಯಸುವ ತೃತೀಯ ಲಿಂಗಿ ಮತ್ತು ದೇವದಾಸಿ ಮಕ್ಕಳ ವಿದ್ಯಾರ್ಥಿಗಳಿಗೆ (ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ ಮಾತ್ರ) ಪ್ರವೇಶಾತಿಯ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಿ ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

------- 

ಡಿ.07ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ ವಿವಿಧ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯ 

ಬಳ್ಳಾರಿ,ಡಿ.05(ಕರ್ನಾಟಕ ವಾರ್ತೆ): 

ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 220ಕೆ.ವಿ ಅಲ್ಲೀಪುರ-ಸ್ವೀಕರಣಾ ಕೇಂದ್ರದಲ್ಲಿ, 220ಕೆ.ವಿ ಮಾರ್ಗದ ಉಪಕರಣಗಳನ್ನು ಪರೀಕ್ಷಿಸುವ ಕಾಮಗಾರಿ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ, 220ಕೆ.ವಿ.ಅಲ್ಲಿಪುರ ಸ್ವೀಕರಣಾ ಕೇಂದ್ರದಿಂದ ಸಂಪರ್ಕ ಹೊಂದಿರುವ 110/33/11ಕೆ.ವಿ ಉಪ-ಕೇಂದ್ರಗಳಿಂದ ಹೊರಹೊಮ್ಮುವ ಎಲ್ಲಾ 33/11ಕೆ.ವಿ ಮಾರ್ಗಗಳಲ್ಲಿ ಡಿ.07ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅನಿಮಿಯತ ಲೋಡ್ (ವಿದ್ಯುತ್ ಅಡಚಣೆ) ಶೆಡ್ಡಿಂಗ್ ಜಾರಿಯಲ್ಲಿದ್ದು, ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಮೋಹನಬಾಬು ಅವರು ತಿಳಿಸಿದ್ದಾರೆ. 

ವಿದ್ಯುತ್ ವ್ಯತ್ಯಯವಾಗುವ ಉಪಕೇಂದ್ರಗಳು: 110/11ಕೆ.ವಿ ದಕ್ಷಿಣ, ಉತ್ತರ, ಹಲಕುಂದಿ, ಮೀನಹಳ್ಳಿ, ಬಿಸಲಹಳ್ಳಿ, ಮೋಕಾ, ಶ್ರೀಧರಗಡ್ಡ ಮತ್ತು ಕುರುಗೋಡು. 33/11ಕೆ.ವಿ ಗುಡದೂರು, ಎಮ್ಮಿಗನೂರು, ರೂಪನಗುಡಿ, ಎರ‌್ರಗುಡಿ. 220/11ಕೆ.ವಿ ಅಲ್ಲೀಪುರ-ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 33/11ಕೆ.ವಿ ಮಾರ್ಗಗಳಲ್ಲಿ ಅನಿಮಿಯತ ಲೋಡ್ (ವಿದ್ಯುತ್ ಅಡಚಣೆ) ಶೆಡ್ಡಿಂಗ್ ಜಾರಿಯಲ್ಲಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ