ಮಕ್ಕಳಿಗೆ ಒಳ್ಳೆಯ ಹೆಸರನ್ನು ಇಟ್ಟು ಸಂಸ್ಕಾರ ನೀಡಿ: ಶರಣೆ ಬಸವಗೀತಾ ಮಾತಾಜಿ
ಮಹಾಲಿಂಗಪುರ : ಮಕ್ಕಳಿಗೆ ಶರಣರ ಹೆಸರುಗಳನ್ನು ಇಟ್ಟು ಒಳ್ಳೆಯ ಸಂಸ್ಕಾರ ನೀಡಿದರೆ, ಭವಿಷ್ಯದಲ್ಲಿ ಅವರು ಮಾದರಿ ವ್ಯಕ್ತಿಗಳಾಗುತ್ತಾರೆ ಎಂದು ಬೆಳಗಾವಿ ಜಿಲ್ಲಾ ನಾಗನೂರು ಗ್ರಾಮದ ಶರಣೆ ಬಸವ ಗೀತಾ ಮಾತಾಜಿಯವರು ಹಿತವಚನ ನೀಡಿದರು.
ಬಸವ ಶರಣ ಮಾದಾರ ಚೆನ್ನಯ್ಯ ಸಮುದಾಯ ಬಡಾವಣೆಯಲ್ಲಿ ಭಾನುವಾರ 12ನೇಯ ಶತಮಾನದ ಮಾದಾರ ಚೆನ್ನಯ್ಯ ಜಯಂತಿಯ ಕುರಿತು ನೀಡಿದ ಪ್ರವಚನದಲ್ಲಿ, ಬಸವಣ್ಣನವರ ಬೆರಳೆಣಿಕೆಯಷ್ಟು ಆಪ್ತ ಶರಣರಲ್ಲಿ ಶರಣ ಚೆನ್ನಯ್ಯನವರೂ ಒಬ್ಬರಾಗಿ, ಅವರ ವಿರಳ ವಚನಗಳು ಇಂದಿಗೂ ಮಾನವಕುಲಕ್ಕೆ ದಾರೀದೀಪವಾಗಿವೆ. ಮಹಾತ್ಮರ ಸ್ಮರಣೆ ಹಾಗೂ ವಚನಗಳನ್ನು ಜಯಂತಿಗಳಿಗಷ್ಟೇ ಮೀಸಲಿರಿಸದೇ, ನಿಜ ಜೀವನದಲ್ಲಿಯೂ ಅಳವಡಿಸಿಕೊಂಡು, ಮುಕ್ತಿ ಮಾರ್ಗಕ್ಕಾಗಿ ತಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕು. ವಚನಗಳು ಮುಂದಿನ ಪೀಳಿಗೆಗೂ ದಾರೀದೀಪವಾಗುವ ದೃಷ್ಟಿಯಲ್ಲಿ ಅವುಗಳ ಸಂರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ ಎಂದು ಅವುಗಳ ಮಹತ್ವವನ್ನು ವಿವರಿಸಿದರು.
ಪ.ಗು.ಹಳಕಟ್ಟಿ ಅವರು ವಚನಗಳ ಸಂಗ್ರಹಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ನಿಜಶರಣರೆನಿಸಿಕೊಂಡು ವಚನ ಪಿತಾಮಹರೆನಿಸಿದರು.ಇವತ್ತೇನಾದರೂ ನಾವು ವಚನಗಳ ಸಾರವನ್ನು ಪಡೆಯುತ್ತಿದ್ದೇವೆ ಎಂದರೆ ಅದಕ್ಕೆ ಹಳಕಟ್ಟಿಯವರೇ ಕಾರಣ, ಆದ್ದರಿಂದ ಪ್ರತಿ ಮನೆಗಳಲ್ಲಿಯೂ ಅವರ ಭಾವಚಿತ್ರ ಹಾಕಿ ಅವರ ಪುಣ್ಯ ಸ್ಮರಿಸಿರಿ ಎಂದು ಬಸವ ಶರಣ ಗಣಕ್ಕೆ ಒತ್ತಿ ಹೇಳಿದರು.
ನಾಗನೂರಿನ ಬಸವ ಗೀತಾ ಮಠದ ಶರಣರಾದ ಬಸವರಾಜ ಅಪ್ಪಾಜಿಯವರು ಜಗಜ್ಯೋತಿ ಬಸವಣ್ಣ ಹಾಗೂ ಶರಣರ ನುಡಿದಂತೆ ನಡೆಯು ಮುಕ್ತಿಗೆ ಮಾರ್ಗ ಎಂಬುದನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಸಿಂಡಿಕೇಟ್ ಕಲಾವಿದ ಡಿ.ಕೆ. ರಂಗನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಣ್ಣ ಬಸವಣ್ಣ ಹಾಗೂ ಶರಣ ಮಾದಾರ ಚೆನ್ನಯ್ಯ ಅವರ ಭಾವಚಿತ್ರಗಳಿಗೆ ಮಾಜಿ ಪುರಸಭಾಧ್ಯಕ್ಷ ಭೀಮಶಿ ಗೌಂಡಿ ಅವರ ಧರ್ಮಪತ್ನಿ ಸುಜಾತಾ ಮತ್ತು ಮಹಾಲಿಂಗಪ್ಪ ಗೌಂಡಿ ಹಾಗೂ ಅವರ ಧರ್ಮಪತ್ನಿ ಸವಿತಾ ಜ್ಯೋತಿ ಬೆಳಗಿಸಿ ಪುಷ್ಪನಮನ ಸಲ್ಲಿಸಿ ಶರಣರಿಗೆ ರುದ್ರಾಕ್ಷಿ ಮಾಲೆಯನ್ನು ತೊಡಿಸಿದರು. ಶಿವಬಸು ಗೌಂಡಿ ಹಾಗೂ ಅವರ ಧರ್ಮಪತ್ನಿ ಮೀನಾಕ್ಷಿಯವರು ಶರಣರನ್ನು ಸನ್ಮಾನಿಸಿದರು. ಶರಣ ಬಸವರಾಜ ಹಡಪದ ವಚನ ಸಾಹಿತ್ಯದ ಹಾಡುಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಬಡಾವಣೆಯ ಲಕ್ಷ್ಮಣ ಮಾಂಗ, ಅರ್ಜುನ ದೊಡಮನಿ, ಪರಶುರಾಮ ಮಾಂಗ, ಎಮ್. ಡಿ.ಆನಂದ, ಪರಶುರಾಮ ಮೇತ್ರಿ,ಸತೀಶ ಗೌಂಡಿ, ದಶರಥ ಮಾಂಗ, ದುರ್ಗಪ್ಪ ಜಮಖಂಡಿ, ಆನಂದ ಮಾದರ, ನಂದನ ಮಾದರ, ಪುಂಡಲಿಕ್ ಮಿಲ್ಟ್ರಿ, ಸಂದೀಪ ದೊಡಮನಿ, ಮೋಹನ ಉತ್ತೂರ, ಸದಾಶಿವ ಗೌಂಡಿ ಇನ್ನು ಮುಂತಾದವರು ಇದ್ದರು.