ಕಡ್ಡಾಯವಾಗಿ ಎಲ್ಲರೂ ಕೋವಿಡ್ ಲಸಿಕೆ ಪಡೆಯಿರಿ
ಬಸನಗೌಡ ಪಾಟೀಲ ಅಭಿಮತ ಽ ನೀಲಕಂಠೇಶ್ವರ ದೇವಸ್ಥಾನದಲ್ಲಿ ಉಚಿತ ಲಸಿಕಾ ಅಭಿಯಾನ
ಮಹಾಲಿಂಗಪುರ21: 18 ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮಾಹಾಮಾರಿ ಕೋವಿಡ್ ರೋಗವನ್ನು ಹೋಗಲಾಡಿಸಲು ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಮುಂಜಾನೆ ನೀಲಕಂಠೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ತಾಲೂಕಾ ಆರೋಗ್ಯ ಕಾರ್ಯಾಲಯ ಹಾಗೂ ಸಮೂದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡ ಪ್ರಧಾನಿ ನರೇಂದ್ರ ಮೋದಿಯವರ ವಿಶ್ವದ ಅತಿ ದೊಡ್ಡ ಉಚಿತ ಲಸಿಕೆ ಅಭಿಯಾನದಡಿ ಸಾರ್ವಜನಿಕರಿಗೆ ಲಸಿಕೆ ಹಾಕಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರ ಇಂದಿನಿಂದ ದೇಶದ ಪ್ರತಿಯೊಬ್ಬರೂ ಉಚಿತ ಲಸಿಕೆ ಪಡೆಯುವ ಉದ್ದೇಶದಿಂದ ಅಭಿಯಾನವನ್ನು ಪ್ರಾರಂಭಿಸಿದ್ದು, 18 ವರ್ಷದಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ತಮ್ಮ ಸ್ವ ಇಚ್ಚೆಯಿಂದ ಈ ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು.ಈ ಲಸಿಕೆಗಳು ಎಲ್ಲರೀತಿಯ ಸುರಕ್ಷತೆಯನ್ನು ಹೊಂದಿದ್ದು, ಇದರ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳಿಗೆ ತಲೆ ಕೆಡೆಸಿಕೊಳ್ಳದೆ, ಲಸಿಕಾ ಕೇಂದ್ರಗಳಿಗೆ ಹೋಗಿ, ನೊಂದಣಿ ಮಾಡಿಸಿ ಲಸಿಕೆ ಪಡೆಯಬೇಕು.ಲಸಿಕೆ ಪಡೆದ ನಂತರವೂ ಸಹ ಸರ್ಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲೇಬೇಕು. ಲಸಿಕೆ ಪಡೆಯುವುದರಿಂದ ಮಾತ್ರ ಕರೋನಾ ಹೋಗುವುದಿಲ್ಲ, ಬದಲಾಗಿ ಸರ್ಕಾರದ ಕೋವಿಡ್ ನಿಯಮಗಳ ಪ್ರಕಾರ ನಡೆದುಕೊಂಡಾಗ ಮಾತ್ರ ಕೋವಿಡ್ ಸೋಂಕನ್ನು ಹಿಮ್ಮೇಟ್ಟಿಸಿ ನಮ್ಮ ದೇಶವನ್ನು ಆರೋಗ್ಯವಂತ ದೇಶವನ್ನಾಗಿ ಮಾಡಲು ಸಾಧ್ಯವಿದೆ ಎಂದರು.
ಸೋಮವಾರ ಪಟ್ಟಣದ ಟೋನಪಿನಾಥ ಮತ್ತು ನೀಲಕಂಠೇಶ್ವರ ದೇವಸ್ಥಾಗಳಲ್ಲಿ ಲಸಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಮದ್ಯಾಹ್ನದ ವರೆಗೆ 18 ವರ್ಷ ಮೇಲ್ಪಟ್ಟ ಸುಮಾರು 439 ಜನರಿಗೆ, 45 ಕ್ಕೂ ಹೆಚ್ಚಿನ 184 ಜನರಿಗೆ ಇಂದು ಲಸಿಕೆ ನೀಡಲಾಗಿದೆ ಎಂದು, ಜಮಖಂಡಿಯ ಟಿ.ಎಚ್.ಓ ಜಿ.ಎಸ್.ಗಲಗಲಿ, ಆರೋಗ್ಯ ನೀರೀಕ್ಷಣಾಧಿಕಾರಿ ಎಂ.ಬಿ ಗೋಣಿ, ಡಾ. ಪ್ರಕಾಶ ಹುಗ್ಗಿ ಪತ್ರಿಕೆಗೆ ತಿಳಿಸಿದ್ದಾರೆ.
ಪುರಸಭೆ ಸದಸ್ಯ ರಾಜು ಚಮಕೇರಿ, ಚನಬಸು ಯರಗಟ್ಟಿ, ಬಸವರಾಜ ಹಿಟ್ಟಿನಮಠ ಮತ್ತು ಬಿಜೆಪಿ ಮುಖಂಡ ಮಹಾಲಿಂಗಪ್ಪ ಮುದ್ದಾಪೂರ, ಚನ್ನಪ್ಪ ಪಟ್ಟಣಶೆಟ್ಟಿ ಈರಪ್ಪ ಚುನಮುರಿ, ರವಿ ಕುಳ್ಳೋಳ್ಳಿ, ಮಹೇಶ ಚಿಂಚಲಿ, ಮುಖ್ಯಾಧಿಕಾರಿ ಎಚ್.ಎಸ್ ಚಿತ್ತರಗಿ ಕಿರಿಯ ಆರೋಗ್ಯ ನೀರೀಕ್ಷಕ ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ ಸೇರಿದಂತೆ ಹಲವರು ಇದ್ದರು.