ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಿಗೆ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನ.
ಮಹಾಲಿಂಗಪುರ 05: ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ಸೈದಾಪುರ್ ಗ್ರಾಮದ ಕಾಂಗ್ರೆಸಿನ ಸಕ್ರಿಯ ಕಾರ್ಯಕರ್ತ ವಿಠ್ಠಲ್. ಪುಂಡಲಿಕಪ್ಪ. ಹೊಸಮನಿ ಅವರನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಹಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಪಕ್ಷವು ಆದೇಶ ಹೊರಡಿಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸ್ತ್ರೀ ಶಕ್ತಿ ಸಂಘಟನಾ ಸಮಿತಿಯ ರಾಜಾಧ್ಯಕ್ಷೆ, ಮಾಜಿ ಸಚಿವರೂ ಆದ ಉಮಾಶ್ರೀ, ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಎಸ್ ಜಿ ನಂಜಯ್ಯನಮಠ, ಕೆಪಿಸಿಸಿ ರಾಜ್ಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಎಫ್.ಎಚ್.ಜಕ್ಕಪ್ಪಣ್ಣವರ್ ಅವರ ಮುತುವರ್ಜಿಯಲ್ಲಿ ಈ ಭಾಗದ ಜಿಲ್ಲಾಧ್ಯಕ್ಷ ರಾಜು.ಎಸ್.ಮನ್ನಿಕೇರಿ ಅವರು ಜುಲೈ 3ರಂದು ಬಾಗಲಕೋಟ ಲೋಕಸಭಾ ಮತಕ್ಷೇತ್ರದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಹೊಸಮನಿಯವರು, ಪಕ್ಷ ಮತ್ತು ನಾಯಕರು ನನ್ನ ಮೇಲಿಟ್ಟಿರುವ ನಂಬಿಕೆಗೆ ದ್ರೋಹ ಮಾಡದೆ, ಪ್ರಾಮಾಣಿಕತೆಯಿಂದ ಪಕ್ಷ ಬೆಳೆಸುವಲ್ಲಿ ಶತ ಪ್ರಯತ್ನ ಮಾಡುತ್ತೇನೆಂದು, ಪಕ್ಷ ನಿಷ್ಠೆಯನ್ನು ಮೆರೆಯುತ್ತ ಈ ನನ್ನ ನೇಮಕದಲ್ಲಿ ಪರೋಕ್ಷ, ಅಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ತಮಗೆ ನೀಡಿರುವಂತಹ ಜವಾಬ್ದಾರಿಯನ್ನು ಪಕ್ಷದ ನೀತಿ, ನಿಯಮಗಳು ಅಲ್ಲದೆ ಸ್ಥಳೀಯ ನಾಯಕರ ಸಹಾಯ, ಸಹಕಾರ ಪಡೆಯುವುದರೊಂದಿಗೆ ಪಕ್ಷದ ಬಲವರ್ಧನೆಯಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.