ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಬೆಳಗಾವಿ : ಬೆಳಗಾವಿ ನಗರ ಸಿಸಿಬಿ ಪೊಲೀಸರು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದು, ಆತ ಈ ಹಿಂದೆ ದಾಖಲಾಗಿದ್ದ ಕೊಲೆ ಹಾಗೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣದಲ್ಲೂ ಪರಾರಿಯಾಗಿದ್ದ ಆರೋಪಿ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತನನ್ನು ಆಕಾಶ ದಿಲೀಪ ದೊಡಮನಿ (ಜಯನಗರ, ಹುಂಚ್ಯಾನಟ್ಟಿ, ಬೆಳಗಾವಿ) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಕಾರ್ತಿಕ್ (ಕಂಗ್ರಾಳ ಬಿ.ಕೆ., ಬೆಳಗಾವಿ) ಕಡೆಯಿಂದ ಗಾಂಜಾ ಪಡೆದು ಜಾಂಬೋಟಿ ರಸ್ತೆಯ ಮೂಲಕ ಮಾರಾಟಕ್ಕೆ ಸಾಗಿಸುತ್ತಿದ್ದ ವೇಳೆ ಸಿಸಿಬಿ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ.
ಈ ಕಾರ್ಯಾಚರಣೆಯಲ್ಲಿ ಆರೋಪಿಯಿಂದ 1 ಕೆಜಿ 704 ಗ್ರಾಂ ಗಾಂಜಾ (ಅಂದಾಜು ಮೌಲ್ಯ 80,000) ಹಾಗೂ ಎರಡು ಮೊಬೈಲ್ ಫೋನ್‌ಗಳು (ಅಂದಾಜು ಮೌಲ್ಯ 11,000) ವಶಪಡಿಸಿಕೊಳ್ಳಲಾಗಿದೆ. ಈ ಸಂಬAಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 184/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 20(b)(ii)(ಃ) ಹಾಗೂ 8(ಛಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಆಕಾಶ ದಿಲೀಪ ದೊಡಮನಿ ವಿರುದ್ಧ ಈ ಹಿಂದೆ ಅಪರಾಧ ಸಂಖ್ಯೆ 137/2026ರಲ್ಲಿ ದಾಖಲಾಗಿದ್ದ ಕೊಲೆ ಹಾಗೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣದಲ್ಲೂ ಆರೋಪಿಯಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿದ್ದನು. ಈ ಕಾರ್ಯಾಚರಣೆಯ ಮೂಲಕ ಆತನನ್ನು ಬಂಧಿಸುವಲ್ಲಿ ಸಿಸಿಬಿ ತಂಡ ಯಶಸ್ವಿಯಾಗಿದೆ.
ಈ ದಾಳಿಯನ್ನು ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ಅವರ ನೇತೃತ್ವದಲ್ಲಿ, ಪಿಎಸ್‌ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ನಡೆಸಿದರು. ತಂಡದ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಭೋರಸೆ ಹಾಗೂ ಡಿಸಿಪಿಗಳು ಪ್ರಶಂಸಿಸಿದ್ದಾರೆ.