ಗಣಪತಿ ಮೂರ್ತಿಯ ಹಿಂದಿರುವ ಪೌರಾಣಿಕ ಕಥೆ ಮತ್ತು ಮಣ್ಣಿನ ಮೂರ್ತಿಗಳ ಮಹತ್ವ
ಲೋಕದರ್ಶನ ವರದಿ
ಗಣಪತಿ ಮೂರ್ತಿಯ ಹಿಂದಿರುವ ಪೌರಾಣಿಕ ಕಥೆ ಮತ್ತು ಮಣ್ಣಿನ ಮೂರ್ತಿಗಳ ಮಹತ್ವ
ಯಮಕನಮರಡಿ, ಸೆ. 12: ಗಣಪತಿ ಹಬ್ಬ ಸಮೀಪಿಸುತ್ತಿದ್ದಂತೆ ಯುವಕರಲ್ಲಿ ಸಂಭ್ರಮ ಮನೆ ಮಾಡಿದೆ. ಮನೆ ಮನೆಗಳಲ್ಲಿ ಬಣ್ಣಬಣ್ಣದ ಅಲಂಕಾರ, ದೀಪಗಳಿಂದ ಶೃಂಗಾರ ಹಾಗೂ ಪಟಾಕಿಗಳ ಸಿಡಿತದ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಆದರೆ ಗಣಪತಿ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ ಎಂಬುದು ಗಮನಾರ್ಹ.
ಪುರಾಣದ ಪ್ರಕಾರ, ಶ್ರೀ ಪಾರ್ವತಿ ದೇವಿಯು ಸ್ನಾನಕ್ಕೆ ತೆರಳುವ ಸಂದರ್ಭದಲ್ಲಿ ತನ್ನ ಮೈ ಮೇಲಿನ ಮಣ್ಣಿನಿಂದ ಗಣಪತಿಯ ವಿಗ್ರಹವನ್ನು ತಯಾರಿಸಿ, ಅದಕ್ಕೆ ಜೀವ ತುಂಬಿ ತನ್ನ ಮನೆಯ ಕಾವಲಿಗೆ ನಿಯೋಜಿಸುತ್ತಾಳೆ. ಇದೇ ಸಂದರ್ಭದಲ್ಲಿ ಶಿವನು ಮನೆಗೆ ಆಗಮಿಸಿದಾಗ, ಕಾವಲಿಗನಾಗಿ ನಿಂತಿದ್ದ ಗಣಪತಿಯು ಪರಮೇಶ್ವರನನ್ನು ಒಳಗೆ ಪ್ರವೇಶಿಸಲು ಬಿಡುವುದಿಲ್ಲ.
ಇದರಿಂದ ಕೋಪಗೊಂಡ ಶಿವನು ತನ್ನ ತ್ರಿಶೂಲದಿಂದ ಗಣಪತಿಯ ತಲೆಯನ್ನು ಕಡಿದುಹಾಕುತ್ತಾನೆ. ನಂತರ ಪಾರ್ವತಿ ದೇವಿಯು ತನ್ನ ಪುತ್ರನ ಸ್ಥಿತಿಯನ್ನು ಕಂಡು ದುಃಖಗೊಂಡು, ಆತನನ್ನು ಜೀವಂತಗೊಳಿಸುವಂತೆ ಶಿವನಿಗೆ ಆದೇಶಿಸುತ್ತಾಳೆ.
ಪಾರ್ವತಿಯ ಆದೇಶದಂತೆ ಶಿವನು ತನ್ನ ಗಣಗಳಿಗೆ ಉತ್ತರ ದಿಕ್ಕಿನತ್ತ ಮುಖ ಮಾಡಿ ಮಲಗಿರುವ ಪ್ರಾಣಿಯ ತಲೆಯನ್ನು ತರುವಂತೆ ಸೂಚಿಸುತ್ತಾನೆ. ಆಗ ಗಣಗಳು ಹುಡುಕಾಟ ನಡೆಸಿದಾಗ ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದ್ದ ಆನೆಯೊಂದು ಕಾಣುತ್ತದೆ. ಅದರ ತಲೆಯನ್ನು ತಂದು ಶಿವನಿಗೆ ಅರ್ಿಸಲಾಗುತ್ತದೆ.
ಶಿವನು ಆನೆಯ ತಲೆಯನ್ನು ಮಣ್ಣಿನಿಂದ ನಿರ್ಮಿಸಲಾದ ಗಣಪತಿಯ ದೇಹಕ್ಕೆ ಜೋಡಿಸಿ ಜೀವ ತುಂಬುತ್ತಾನೆ. ಹೀಗೆ ಆನೆಯ ಮುಖವನ್ನು ಹೊಂದಿದ ಗಣಪತಿಗೆ ‘ಲಂಬೋದರ’ ಸೇರಿದಂತೆ ವಿವಿಧ ಹೆಸರುಗಳಿಂದ ಪೂಜೆ ಸಲ್ಲಿಸುವ ಪರಂಪರೆ ಆರಂಭವಾಯಿತು ಎಂದು ಶಿವಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಮಣ್ಣಿನ ಗಣಪತಿ ಮೂರ್ತಿಗಳ ಪರಂಪರೆ
ಹಿಂದಿನ ದಿನಗಳಲ್ಲಿ ಮೂರ್ತಿಕಾರರು ಗುಡ್ಡ ಪ್ರದೇಶಗಳಿಗೆ ತೆರಳಿ ಅಲ್ಲಿಂದ ಮಣ್ಣನ್ನು ತಂದು, ಅದನ್ನು ಸಂಸ್ಕರಿಸಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಈ ಮೂಲಕ ನೈಸರ್ಗಿಕ ಮಣ್ಣಿನಿಂದ ಗಣಪತಿ ವಿಗ್ರಹಗಳನ್ನು ನಿರ್ಮಿಸುವ ಪರಂಪರೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಆದರೆ ಆಧುನಿಕ ಕಾಲದಲ್ಲಿ ಮೂರ್ತಿಗಳನ್ನು ತಯಾರಿಸಲು ಅಗತ್ಯವಾದ ಉತ್ತಮ ಗುಣಮಟ್ಟದ ಮಣ್ಣು ಸುಲಭವಾಗಿ ದೊರೆಯುತ್ತಿಲ್ಲ ಎಂದು ಮೂರ್ತಿಕಾರರು ಹೇಳುತ್ತಾರೆ. ಹೀಗಾಗಿ ವಿವಿಧ ರೀತಿಯ ಮಿಶ್ರಿತ ಮಣ್ಣನ್ನು ಬಳಸಿ ಗಣಪತಿ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ.
ತಂತ್ರಜ್ಞಾನ ಬೆಳವಣಿಗೆಯೊಂದಿಗೆ ಇಂದಿನ ಮೂರ್ತಿಕಾರರು ವಿವಿಧ ವಿನ್ಯಾಸಗಳು ಹಾಗೂ ಬಣ್ಣಗಳ ಮೂಲಕ ಗಣಪತಿ ಮೂರ್ತಿಗಳಿಗೆ ಆಕರ್ಷಕ ರೂಪ ನೀಡುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಭಕ್ತರ ಬೇಡಿಕೆಗೆ ಅನುಗುಣವಾಗಿ ವಿವಿಧ ಗಾತ್ರ, ವಿನ್ಯಾಸ ಮತ್ತು ರೂಪಗಳಲ್ಲಿ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಲಾಗುತ್ತಿದೆ.
ವರ್ಷಕ್ಕೆ ಸಾವಿರಾರು ಮೂರ್ತಿಗಳ ತಯಾರಿಕೆ
ಯಮಕನಮರಡಿ ಸಮೀಪದ ಇಂದಿರಾನಗರದಲ್ಲಿ ಓರ್ವ ಮೂರ್ತಿಕಾರರು ತಮ್ಮ ಮೂಲ ಕಸುಬನ್ನು ಮುಂದುವರಿಸಿಕೊಂಡು ಪ್ರತಿವರ್ಷ ಸುಮಾರು 2,000 ಗಣಪತಿ ವಿಗ್ರಹಗಳನ್ನು ವಿವಿಧ ರೂಪಗಳಲ್ಲಿ ತಯಾರಿಸುತ್ತಿದ್ದಾರೆ.
ಆಧುನಿಕ ಯುಗದ ಬೇಡಿಕೆಗೆ ತಕ್ಕಂತೆ ಹೊಸ ವಿನ್ಯಾಸ ಹಾಗೂ ಬಣ್ಣಗಳನ್ನು ಅಳವಡಿಸಿಕೊಂಡು ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿರುವ ಅವರು, ಮೂರ್ತಿಕಾರಿಕೆಯ ಮೂಲಕ ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ.
ವಿಶೇಷ ಲೇಖನ:
ಗೋಪಾಲ್ ಚಪ್ಪಣಿ
ಪತ್ರಕರ್ತರು, ಸಾಹಿತಿಗಳು, ಯಮಕನಮರಡಿ