ರಾಣೆಬೆನ್ನೂರ

ಚಿಕ್ಕ ಅರಳಿಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಚಿಕ್ಕ ಅರಳಿಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ರಾಣೇಬೆನ್ನೂರು 07: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್‌) ರಾಣೇಬೆನ್ನೂರು-2 ಹಾಗೂ ತಾಲ್ಲೂಕಿನ ಚಿಕ್ಕ ಅರಳಿಹಳ್ಳಿ ಕಾರ್ಯಕ್ಷೇತ್ರದ ಶ್ರೀ ಮರಿಯಮ್ಮದೇವಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಎಂ.ಎಂ. ಜೋಶಿ ಆಸ್ಪತ್ರೆ ಹಾಗೂ ಹರನಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಚಿಕ್ಕ ಅರಳಿಹಳ್ಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಲಾಗಿತ್ತು.  

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಂಜುನಾಥ್ ಎಂ., ಗ್ರಾಮೀಣ ಭಾಗದ ಜನರು, ವಿಶೇಷವಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಇಂತಹ ಆರೋಗ್ಯ ಶಿಬಿರಗಳು ಸಹಕಾರಿಯಾಗುತ್ತವೆ. ಸಾರ್ವಜನಿಕರು ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.  

ಹರನಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಎಂ.ಎಂ. ಜೋಶಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದು ಆರೋಗ್ಯವಂತರಾಗಬೇಕು ಎಂದು ತಿಳಿಸಿದರು. ಅಲ್ಲದೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಕಣ್ಣಿನ ತಪಾಸಣೆ ಕುರಿತು ಸಲಹೆ ನೀಡಿದರು.  

ಆರೋಗ್ಯ ನೀರೀಕ್ಷಣಾಧಿಕಾರಿ ಮೋಹನ್ ಅವರು ಡೆಂಗ್ಯೂ, ಕ್ಷಯರೋಗ ಸೇರಿದಂತೆ ವಿವಿಧ ಕಾಯಿಲೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.  ಎಸ್ಡಿಎಂಸಿ ಅಧ್ಯಕ್ಷ ಶಿವಾಜಿ ನನ್ನುರಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದ್ದು, ಸುಮಾರು ನೂರಕ್ಕೂ ಹೆಚ್ಚು ಜನರು ತಪಾಸಣೆಯಲ್ಲಿ ಭಾಗವಹಿಸಿದ್ದಾರೆ. ಬಡ ಜನರಿಗೆ ಇದು ವರದಾನವಾಗಿದೆ ಎಂದು ಯೋಜನೆಯ ಕಾರ್ಯವನ್ನು ಪ್ರಶಂಸಿಸಿದರು.  ಈ ಸಂದರ್ಭದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ ಕಮಡೊಳ್ಳಿ, ಸೇವಾ ಪ್ರತಿನಿಧಿ ಗೀತಾ ದುರ್ಗದ, ನೇತ್ರಾ ಹುಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ