25 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರ: ಡಾ.ಪ್ರಭುಸಾರಂಗದೇವಶ್ರೀ
ಸಿಂದಗಿ 24: ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ 25 ವರ್ಷಗಳಿಂದ ಉಚಿತ ನೇತ್ರ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹೀಗೆ ವಿವಿಧ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತ ಬರಲಾಗಿದೆ ಎಂದು ಸಾರಂಗಮಠದ ಪೀಠಾಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ಬುಧವಾರ ಲಿಂಗೈಕ್ಯ ಚೆನ್ನವೀರ ಸ್ವಾಮೀಜಿಯವರ 33ನೇ ಸ್ಮರಣೋತ್ಸವದ ಅಂಗವಾಗಿ ವಿಜಯಪುರದ ಅನುಗ್ರಹ ವ್ಹಿಜನ್ ಫೌಂಡೇಶನ್, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ, ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಉಚಿತ ನೇತ್ರ ತಪಾಸಣಾ ಶಿಬಿರ ವಿಭಾಗದ ಮುಖ್ಯಸ್ಥ ದತ್ತಾತ್ರೆಯ ಹೊಸಮಠ ಪ್ರಾಸ್ತಾವಿಕವಾಗಿ ಮಾತನಾಡಿ, ‘ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಬಿ.ಎಲ್. ಚಬನೂರ ಅವರ ನೇತೃತ್ವದಲ್ಲಿ ಇದುವರೆಗೆ 40 ಸಾವಿರ ಉಚಿತ ನೇತ್ರ ಶಸ್ತ್ರಚಿಕಿತ್ಸೆ, ಎರಡೂವರೆ ಲಕ್ಷ ಹೊರರೋಗಿಗಳಿಗೆ ಉಚಿತ ನೇತ್ರ ತಪಾಸಣೆ ಮಾಡಲಾಗಿದೆ. ಒಂದು ಸಾವಿರ ಉಚಿತ ನೇತ್ರ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.
ಪ್ರಸ್ತುತ ಶಿಬಿರದಲ್ಲಿ 300 ಹೊರರೋಗಿಗಳಿಗೆ ಉಚಿತ ತಪಾಸಣೆ ಮಾಡಲಾಗಿದೆ. ಇದರಲ್ಲಿ 120 ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.
ಅನುಗ್ರಹ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಕಾರ್ತಿಕ್, ಸಂಗಮೇಶ ಪಾಟೀಲ, ವಿನಾಯಕ ಪವಾರ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಚೆನ್ನು ಕತ್ತಿ, ಶಿವಕುಮಾರ ಜೋಗೂರ, ಭೀಮಾಶಂಕರ ಪಾಸೋಡಿ, ರವಿ ಗೋಲಾ ಶಿಬಿರದ ಉಸ್ತುವಾರಿ ಕಾರ್ಯದ ಪ್ರಮುಖರಾಗಿದ್ದರು.